ತೆರಿಗೆ ವಂಚನೆ ಪತ್ತೆ ಹಚ್ಚಲು ಟೋಟಲ್ ಸ್ಟೇಷನ್ ಸರ್ವೆ: ಗುಣ ಶೇಖರ್
ಬೆಂಗಳೂರು, ಮೇ 19: ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ವಂಚಿಸುತ್ತಿರುವ ಮಾಲ್‌ಗಳು, ಐಟಿ ಕಂಪೆನಿಗಳನ್ನು ಪತ್ತೆ ಹಚ್ಚಲು ಟೋಟಲ್ ಸ್ಟೇಷನ್ ಸರ್ವೆ ಕಾರ್ಯವನ್ನು ಆರಂಭಿಸಲಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಲಹಂಕ, ಬೊಮ್ಮನಹಳ್ಳಿ, ಪಶ್ಚಿಮ ವಲಯಗಳಲ್ಲಿರುವ ಟೆಕ್ ಪಾರ್ಕ್‌ಗಳು ಮತ್ತು ಮಾಲ್‌ಗಳನ್ನು ಪತ್ತೆ ಹಚ್ಚುವ ಸಲುವಾಗಿ ಈಗಾಗಲೇ ಏಜೆನ್ಸಿಗಳಿಗೆ ಕಾರ್ಯಾದೇಶ ಪತ್ರಗಳನ್ನು ನೀಡಲಾಗಿದ್ದು, ಮುಂದಿನ ವಾರದಿಂದ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಪಶ್ಚಿಮ ವಲಯದಲ್ಲಿನ ಬ್ರಿಗೇಡ್ ವರ್ಲ್ಡ್, ಶರಟಾನ್ ಹೊಟೇಲ್, ಗೋಪಾಲನ್ ಮಾಲ್, ಮಂತ್ರಿ ಮಾಲ್, ಸುಮಂಗಲಿ, ಯಲಹಂಕ ವಲಯದ ಮಾನ್ಯತಾ ಟೆಕ್ ಪಾರ್ಕ್, ಕಲ್ಯಾಣ ಟೆಕ್ ಪಾರ್ಕ್, ಜೆಎಂಆರ್ ಟೆಕ್‌ಪಾರ್ಕ್ ಸೇರಿದಂತೆ ಇತರ ಕಟ್ಟಡಗಳಲ್ಲಿ ಟೋಟಲ್ ಸರ್ವೆ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು.
ನಗರದಲ್ಲಿ ಒಟ್ಟು 51 ಮಾಲ್‌ಗಳು, 79 ಟೆಕ್ ಪಾರ್ಕ್‌ಗಳಿದ್ದು ಎಲ್ಲವನ್ನೂ ಟೋಟಲ್ ಸ್ಟೇಷನ್ ಸರ್ವೆ ಕಾರ್ಯದ ವ್ಯಾಪ್ತಿಗೆ ಒಳಪಡಿಸಲಾಗುವುದು. 2ನೆ ಹಂತದಲ್ಲಿ ಇನ್ನಷ್ಟು ಟೆಕ್ ಟಾರ್ಕ್‌ಗಳನ್ನು ಮತ್ತು ಮಾಲುಗಳನ್ನು ಗುರುತಿಸಲಾಗುವುದು. ಆಸ್ತಿದಾರರು ತೆರಿಗೆಯನ್ನು ಸುಲಭವಾಗಿ ಕಟ್ಟಲು ಕೆನರಾ ಬ್ಯಾಂಕ್ 10 ಕಡೆ ತಾತ್ಕಾಲಿಕ ಕೇಂದ್ರಗಳನ್ನು ಆರಂಭಿಸಿದೆ ಎಂದು ಅವರು ಹೇಳಿದರು.
ಜಯನಗರ, ಬೆಮೆಲ್ ನಗರ, ದಾಸರಹಳ್ಳಿ, ಕಾಕ್ಸ್‌ಟೌನ್, ಸರ್.ಸಿವಿ ರಾಮನ್ ನಗರ, ಬೊಮ್ಮನಹಳ್ಳಿ, ಮಾರತ್ ಹಳ್ಳಿ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ಭಾಗಗಳಲ್ಲಿ ತೆರಿಗೆ ಕೇಂದ್ರಗಳನ್ನು ತೆರೆಯಲಾಗಿದೆ. ಹಾಗೂ ಕೆನರಾ ಬ್ಯಾಂಕ್ ಮೂಲಕ ಆಸ್ತಿ ತೆರಿಗೆಯನ್ನು ಕಟ್ಟಬಹುದಾಗಿದೆ ಎಂದು ಅವರು ಹೇಳಿದರು.
ಮೇ 31ರವರೆಗೆ ತೆರಿಗೆ ಕಟ್ಟಲು ಶೇ.5ರಷ್ಟು ರಿಯಾಯಿತಿ ಇದ್ದು, ನಗರದ ಜನತೆ ಅವಧಿ ಮುಗಿಯುವ ಮುನ್ನ ತೆರಿಗೆ ಕಟ್ಟುವ ಮೂಲಕ ಸರಕಾರಿ ಕೆಲಸ ಕಾರ್ಯಗಳು ಸುಲಭವಾಗಿ ನಡೆಯಲು ಅವಕಾಶ ಮಾಡಿಕೊಡಬೇಕು. ಇಲ್ಲಿಯವರೆಗೆ 675ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 450ಕೋಟಿ ರೂ.ಸಂಗ್ರಹ ವಾಗಿತ್ತು. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.