ಬಿಜೆಪಿ ನಾಯಕರು ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ: ವಿ.ಎಸ್.ಉಗ್ರಪ್ಪ
ಬೆಂಗಳೂರು, ಮೇ 20: ಬರ ಅಧ್ಯಯನದ ನೆಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದ ತಂಡ ಚಿತ್ರದುರ್ಗದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮನೆಯಲ್ಲಿ ಕುಳಿತು ಅವರು ಮಾಡಿದ ತಿಂಡಿಯನ್ನು ತಿನ್ನದೆ ಹೊಟೇಲ್‌ನಿಂದ ತರಿಸಿಕೊಂಡು ತಿನ್ನುವ ಮೂಲಕ ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯ ರಾಜ್ಯಾಧ್ಯಕ್ಷರಾಗಿರುವ ಬಿ.ಎಸ್. ಯಡಿಯೂರಪ್ಪ ದಲಿತರ ಮನೆಯ ಆಹಾರ ಸ್ವೀಕರಿಸದೆ ಅಸ್ಪಶ್ಯತೆಯನ್ನು ಆಚರಿಸಿದ್ದಾರೆ. ರಾಜ್ಯಾಧ್ಯಕ್ಷರದೇ ಈ ರೀತಿಯ ಮನಸ್ಥಿತಿಯಾದರೆ ಉಳಿದ ಮುಖಂಡರಿಗೆ, ಕಾರ್ಯಕರ್ತರಿಗೆ ಯಾವ ಮಾರ್ಗದರ್ಶನ ಕೊಡುತ್ತಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ನಾಯಕರು ದಲಿತರ ಮನೆಯಲ್ಲಿ ಕುಳಿತು ಹೊಟೇಲ್‌ನಿಂದ ತಿಂಡಿ ತಿನ್ನುವ ಮೂಲಕ ಬಿಜೆಪಿಯ ಜನವಿರೋಧಿ ಸಿದ್ಧಾಂತವನ್ನು ಜಗಜ್ಜಾಹೀರು ಮಾಡಿದ್ದಾರೆ. ಈ ಮೂಲಕವಾದರು ನಾಡಿನ ಜನತೆ ಬಿಜೆಪಿಯ ಮನುಷ್ಯ ವಿರೋಧಿ ನೀತಿಯನ್ನು ಅರಿಯಬೇಕೆಂದು ಅವರು ಮನವಿ ಮಾಡಿದರು.
ಬಿಜೆಪಿ ನಾಯಕರು ನಡುವೆ ವೈಮನಸು ದಟ್ಟವಾಗಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಬರ ಅಧ್ಯಯನವೆಂದು ಕುಂಟು ನೆಪ ಹೇಳಿಕೊಂಡು ರಾಜಕೀಯ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿಯ ರಾಜಕೀಯ ಪ್ರಚಾರದ ವೇಳೆಯೇ ಅಸ್ಪಶ್ಯತೆ ಆಚರಣೆ ಮಾಡುವ ಮೂಲಕ ಜನವಿರೋಧಿ ನೀತಿಯನ್ನು ಪ್ರದರ್ಶಿಸಿದ್ದಾರೆ ಎಂದು ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.