​ಎಂಡೋ ಸಂತ್ರಸ್ತರ ನ್ಯಾಯಕ್ಕೆ ಆಗ್ರಹ: ಮೇ 27 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

Update: 2017-05-22 14:35 GMT

ಬೆಂಗಳೂರು, ಮೇ 22: ರಾಜ್ಯದಲ್ಲಿನ ಎಂಡೋ ಸಂತ್ರಸ್ತರಿಗೆ ನ್ಯಾಯ ಕಲ್ಪಿಸಬೇಕೆಂದು ಆಗ್ರಹಿಸಿ ಮೇ 27 ರಿಂದ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಎಂಡೋ ವಿರೋಧಿ ಹೋರಾಟ ಸಮಿತಿ ವತಿಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಶ್ರೀಧರ ಗೌಡ ತಿಳಿಸಿದ್ದಾರೆ.

ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ 7 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಎಂಡೋ ಸಂತ್ರಸ್ತರಿದ್ದು, ದಕ್ಷಿಣ ಕನ್ನಡದ ಒಂದೇ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಎಂಡೋ ಸಂತ್ರಸ್ತರು ನರಳುತ್ತಿದ್ದಾರೆ.

ಮಾಧ್ಯಮಗಳಲ್ಲಿ ಎಂಡೋ ಸಂತ್ರಸ್ತರಿಗೆ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ ಎಂದು ವರದಿಯಾಗುತ್ತಿದೆ. ಆದರೆ, ವಾಸ್ತವವಾಗಿ ಸಂತ್ರಸ್ತರಿಗೆ ಯಾವುದೇ ಸೌಲಭ್ಯ ದೊರೆತಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಹೀನಾಯ ಸ್ಥಿತಿಗೆ ತಲುಪುತ್ತಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಎಂಡೋ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಕಳೆದ ವರ್ಷ ನಗರದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು. ಸರಕಾರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನೂ ನೀಡಲಾಗಿತ್ತು. ಆದರೆ, ಇದುವರೆಗೂ ಭರವಸೆಯನ್ನು ಈಡೇರಿಸಲು ಮುಂದಾಗಿಲ್ಲ ಎಂದ ಅವರು, ರಾಜ್ಯದ ಜನಪ್ರತಿನಿಧಿಗಳು ಎಂಡೋ ಸಂತ್ರಸ್ತರ ಪರವಾಗಿ ಮಾತಾಡುವುದರಲ್ಲಿ ವಿಫಲರಾಗಿದ್ದಾರೆ. ಆದರೆ, ಕೇರಳ ಸರಕಾರ ಎಂಡೋ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿ, ವಿತರಿಸುತ್ತಿದೆ ಎಂದು ಹೇಳಿದರು.

ಎಲ್ಲ ಸಂತ್ರಸ್ತರಿಗೆ ತಲಾ 5 ಸಾವಿರ ಮಾಸಾಶನ ನೀಡಬೇಕು. ಎಂಡೋ ಪೀಡಿತರಿಗೆ 10 ಲಕ್ಷ ಪರಿಹಾರ ನೀಡಬೇಕು. ತಾಲೂಕಿಗೆ ಒಂದು ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕು. ಮಲಗಿದ್ದಲ್ಲೇ ಇರುವ ಸಂತ್ರಸ್ತರ ಚಿಕಿತ್ಸೆಗಾಗಿ ಗ್ರಾಮಕ್ಕೊಂದು ಸ್ಟಾಫ್ ನರ್ಸನ್ನು ನೀಡಬೇಕು. ಎಂಡೋ ಸಂತ್ರಸ್ತರಿಗೆ ನೀಡುವ ಬಸ್‌ಪಾಸ್ ಅನ್ನು ಮಲಗಿದ್ದಲ್ಲಿಯೇ ಇರುವವರಿಗೂ ಹಾಗೂ ಪೋಷಕರಿಗೆ ನೀಡಬೇಕು. ಸಂತ್ರಸ್ತರಿಗಾಗಿ ನಡೆಯುತ್ತಿರುವ ಮಾಸಿಕ ಶಿಬಿರಗಳಲ್ಲಿ ತಜ್ಞ ವೈದ್ಯರು ಭಾಗವಹಿಸದೆ, ವೈದ್ಯ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಈ ಕುರಿತು ಸರಕಾರ ಗಮನ ನೀಡಬೇಕು. ಎಂಡೋ ಸಂತ್ರಸ್ತರ ಪಾಲನಾ ಕೇಂದ್ರಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು. ಎಂಡೋ ಸಂತ್ರಸ್ತರಾಗಿ ಮೃತಪಟ್ಟ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಮೇ 27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಬಂಧಪಟ್ಟ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಗಳು ಸ್ಥಳಕ್ಕೆ ಆಗಮಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಕುರಿತು ಭರವಸೆ ನೀಡಬೇಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News