ಭಾರತ ಮತ್ತೆ ಎರಡು ಭಾಗ ಆಗಲಿದೆ: ಚಂಪಾ

Update: 2017-05-23 18:04 GMT

ಬೆಂಗಳೂರು, ಮೇ 23: ರಾಷ್ಟ್ರದ ಒಕ್ಕೂಟ ವ್ಯವಸ್ಥೆಯಲ್ಲಿ ದಕ್ಷಿಣ ಭಾರತ ರಾಜ್ಯಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಹೀಗಾಗಿ, ಮುಂದೆ ಭಾರತ ದೇಶ ಮತ್ತೆ ಎರಡು ಭಾಗ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರ ಶೇಖರ ಪಾಟೀಲ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ಪುರಭವನದ ಎದುರು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ನಡೆಸಿದ ಕೇಂದ್ರ ಸರಕಾರದ ಹಿಂದಿ ಹೇರಿಕೆಯ ವಿರುದ್ಧ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ದಕ್ಷಿಣ ಭಾರತದ ರಾಜ್ಯಗಳಿಗೆ ತ್ರಿಭಾಷಾ ಸೂತ್ರಗಳನ್ನು ಹಾಕಲಾಗಿದೆ. ಅದೇ ರೀತಿ, ಉತ್ತರ ಭಾರತ ರಾಜ್ಯಗಳಿಗೆ ದ್ವಿಭಾಷಾ ಸೂತ್ರ ಇದೆ. ಅಲ್ಲದೆ, ಉತ್ತರದಲ್ಲಿ ದಕ್ಷಿಣ ಭಾರತದ ಯಾವುದಾದರೂ ಒಂದು ಭಾಷೆಯನ್ನು ಕಲಿಯಬೇಕೆಂದು ಹೇಳಿದ್ದರೂ, ಇದುವರೆಗೂ ಯಾರು ಕಲಿಯಲು ಮುಂದಾಗಿಲ್ಲ. ಆದರೆ, ನಾವೇಕೆ ಹಿಂದಿ ಕಲಿಯಬೇಕೆಂದು ಅವರು ಪ್ರಶ್ನಿಸಿದರು.

ಶತಮಾನಗಳಿಂದಲೂ ದ್ರಾವಿಡ ಭಾಷೆಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದ ಅವರು, ಎಲ್ಲ ರಾಜ್ಯಗಳು ಸೇರಿ ಒಂದು ರಾಷ್ಟ್ರ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೆವು. ಆದರೆ, ಪದೇ ಪದೇ ದಕ್ಷಿಣ ರಾಜ್ಯಗಳ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ. ಇದೀಗ ಹಿಂದಿ ಭಾಷೆ ಹೇರಿಕೆಯೂ ಹೊಸದಲ್ಲ, ಇದರ ಹಿಂದೆಯೂ ಅನೇಕ ಭಾರಿ ಭಾಷಾ ವಿಚಾರವಾಗಿ ತಾರತಮ್ಯ ಆಗಿದೆ. ಹೀಗಾಗಿ, ಈ ಒಕ್ಕೂಟ ವ್ಯವಸ್ಥೆಯಿಂದ ಹೊರಬರುವ ಕಾಲ ದೂರ ಉಳಿದಿಲ್ಲ ಎಂದು ಚಂಪಾ ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನುಬಳಿಗಾರ್ ಮಾತನಾಡಿ, ಭಾರತ ಬಹುಭಾಷೆ ಸಂಸ್ಕೃತಿಗಳನ್ನು ಹೊಂದಿರುವ ದೇಶ. ಈ ಸಾಂಸ್ಕೃತಿಕ ಬಹುತ್ವವೇ ಭಾರತೀಯರ ಹೆಮ್ಮೆ. ಅಲ್ಲದೆ, ಕನ್ನಡ, ಹಿಂದಿ ಸೇರಿದಂತೆ ಒಟ್ಟು 22 ಭಾಷೆಗಳಿಗೆ ಸಂವಿಧಾನ ಮಾನ್ಯತೆ ನೀಡಿದೆ. ಆದರೆ, ಹಿಂದಿ ಭಾಷೆಯನ್ನು ಮಾತ್ರ ಕಡ್ಡಾಯಗೊಳಿಸುವ ಪ್ರಕ್ರಿಯೆ ಸರಿಯಲ್ಲ. ಇದರ ವಿರುದ್ಧ ಇನ್ನಷ್ಟು ಹೋರಾಟಗಳು ನಡೆಯಲಿವೆ ಎಂದು ಹೇಳಿದರು.

ಮಾಜಿ ಸಚಿವ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಈಗಾಗಲೇ ಆಹಾರದ ಹಕ್ಕನ್ನು ಕೇಂದ್ರದ ಮೋದಿ ಸರಕಾರ ಕಸಿದುಕೊಂಡಿದೆ. ಈಗ ಭಾಷೆಯ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಿದೆ. ಹೀಗಾಗಿ, ಇದರ ವಿರುದ್ಧ ಪ್ರತಿಯೊಬ್ಬರು ಪ್ರತಿಭಟಿಸಬೇಕು. ಇಲ್ಲದಿದ್ದಲ್ಲಿ, ನಮ್ಮ ಆಸ್ತಿತ್ವವನ್ನೆ ಕಳೆದುಕೊಳ್ಳಲಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಚಿಂತಕ, ಹಿರಿಯ ಶಿಕ್ಷಣ ತಜ್ಞ ಜಿ.ರಾಮಕೃಷ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ, ಸಾಹಿತಿ ಜರಗನಹಳ್ಳಿ ಶಿವಶಂಕರ್, ಬೆಂ.ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಮಾಜಿ ಅಧ್ಯಕ್ಷ ಡಾ.ಕೋ.ವೆಂ.ರಾಮಕಷ್ಣೇಗೌಡ, ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಕಾರ್ಯಾಧ್ಯಕ್ಷ ಸಿದ್ದಯ್ಯ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News