ಬಾಂಗ್ಲಾದೇಶದ ಸೈನಿಕರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ
ಬೆಂಗಳೂರು, ಮೇ 24: ಅಮೃತ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಅಮೃತ ಹಾಸ್ಪಿಟಲ್ಸ್) ಇದೀಗ ಬಾಂಗ್ಲಾದೇಶ ಸಶಸ್ತ್ರ ಪಡೆಗಳ (ಬಿಎಎಫ್) ಯೋಧರು, ಮಾಜಿ ಸೈನಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಚಿಕಿತ್ಸೆ ನೀಡಿಕೆ ಆರಂಭಿಸಿದೆ.
ಈ ನಿಟ್ಟಿನಲ್ಲಿ ರೋಗಿಗಳ ಆರೈಕೆ, ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಹಾಗೂ ಆರೋಗ್ಯ ವೃತ್ತಿಪರರ ವಿನಿಮಯಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮೇಜರ್ ಜನರಲ್ ಎಸ್.ಎಂ.ಮೋಟಹಾರ್ ಹುಸೇನ್ ಮತ್ತು ಕೊಚ್ಚಿಯ ಅಮೃತ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವೈದ್ಯಕೀಯ ನಿರ್ದೇಶಕ ಡಾ. ಪ್ರೇಮ್ ನಾಯರ್ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಒಪ್ಪಂದದ ಬಗ್ಗೆ ಮಾಹಿತಿ ನೀಡಿದ ಅಮೃತ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ವೈದ್ಯಕೀಯ ನಿರ್ದೇಶಕ ಡಾ.ಪ್ರೇಮ್ ನಾಯರ್, ದಕ್ಷಿಣ ಏಷ್ಯಾದಲ್ಲಿ ಇದೊಂದು ಅವಿಸ್ಮರಣೀಯವಾದ ಅಂತಾರಾಷ್ಟ್ರೀಯ ಸಹಕಾರವಾಗಿದೆ. ಈ ಒಪ್ಪಂದ ಕೇವಲ ರೋಗಿಯನ್ನು ಗುಣಪಡಿಸುವುದಷ್ಟೇ ಅಲ್ಲ. ಇದರೊಂದಿಗೆ ಎರಡು ಅತ್ಯಂತ ಪ್ರಮುಖವಾದ ವ್ಯಕ್ತಿ ಅಥವಾ ದೇಶಗಳ ನಡುವಿನ ಪಾರಂಪರಿಕ ಮತ್ತು ಸಂಸ್ಕೃತಿಯನ್ನು ಬಲಗೊಳಿಸಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಾಂಗ್ಲಾದೇಶದ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮೇಜರ್ ಜನರಲ್ ಎಸ್.ಎಂ.ಮೋಟಹಾರ್ ಹುಸೇನ್, ಈ ಒಪ್ಪಂದ ಎರಡೂ ದೇಶಗಳ ಸೌಹಾರ್ದತೆಯ ಸಂಬಂಧಗಳನ್ನು ಮತ್ತಷ್ಟು ಹತ್ತಿರ ಮಾಡುತ್ತಿದೆ. ಅಮೃತ ಹಾಸ್ಪಿಟಲ್ಸ್‌ನಲ್ಲಿರುವ ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆಯಿಂದ ನಮ್ಮ ಬಿಎಎಫ್ ಸಿಬ್ಬಂದಿಗೆ ಸೂಕ್ತ ಚಿಕಿತ್ಸೆಗಳು ದೊರೆಯಲಿವೆ ಎಂದರು.
ಅಮೃತ ಹಾಸ್ಪಿಟಲ್‌ನ ಡಾ.ಪ್ರೇಮ್ ನಾಯರ್ ಮತ್ತು ಬಾಂಗ್ಲಾದೇಶದ ಹೈಕಮೀಷನ್‌ನ ಭದ್ರತಾ ಸಲಹೆಗಾರ ಬ್ರಿಗೇಡಿಯರ್ ಜನರಲ್ ಅಬ್ದುಲ್ ಹಮೀದ್ ಅವರ ಸಮ್ಮುಖದಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಯಿತು.