ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪ

Update: 2017-05-26 14:48 GMT

ಬೆಂಗಳೂರು, ಮೇ 26: ಅಪ್ರಾಪ್ತ ಬಾಲಕಿಯ ಮೇಲೆ ಅಪ್ರಾಪ್ತ ಬಾಲಕ ಸೇರಿ ಮೂವರು ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

15 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ ಯುವಕ ದಿನವೂ ಆಕೆಯನ್ನು ಶಾಲೆಯ ಬಳಿ ಭೇಟಿಯಾಗುತ್ತಿದ್ದ. ಶಾಲೆ ಮುಗಿದ ನಂತರ ಬಾಲಕಿಯನ್ನು ಹೊಟೇಲ್ ಹಾಗೂ ಇನ್ನಿತರೆ ಜಾಗಗಳಿಗೆ ಕರೆದುಕೊಂಡು ಹೋಗಿ ಸುತ್ತಾಡುತ್ತಿದ್ದ, ಬೇಸಿಗೆ ರಜೆಯಿದ್ದುದರಿಂದ ಆಕೆಯನ್ನು ಪುಸಲಾಯಿಸಿ ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದು, ಸಿನಿಮಾ ನೋಡಿ ಹೊರಬಂದ ಯುವಕ ಅಪ್ರಾಪ್ತ ಬಾಲಕಿಯನ್ನು ಪೀಣ್ಯ 2ನೆ ಹಂತದ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ನಂತರ ತನ್ನ ಸ್ನೇಹಿತರಿಬ್ಬರನ್ನೂ ಕರೆಸಿ ಅತ್ಯಾಚಾರಕ್ಕೆ ಸಹಕರಿಸಿದ್ದಾನೆ. ಆತನ ಸ್ನೇಹಿತರಿಬ್ಬರೂ ಅಪ್ರಾಪ್ತರಾಗಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಅತ್ಯಾಚಾರಕ್ಕೊಳಗಾಗಿ ಆಘಾತಗೊಂಡ ಬಾಲಕಿ ತನ್ನ ಸ್ನೇಹಿತೆಗೆ ಕರೆಮಾಡಿ ಆಕೆಯ ಮನೆಗೆ ತೆರಳಿದ್ದು, ತಾಯಿಗೆ ವಿಷಯ ತಿಳಿದರೆ ಗಾಬರಿಗೊಳ್ಳುತ್ತಾರೆ ಎನ್ನುವ ಭಯದಲ್ಲಿ ಬಾಲಕಿ ತನ್ನ ಸ್ನೇಹಿತೆಯ ಮನೆಯಲ್ಲಿಯೇ 5 ದಿನಗಳ ಕಾಲ ಉಳಿದುಕೊಂಡಿದ್ದಾಳೆ. ಇತ್ತ ಗಾಬರಿಗೊಂಡ ಬಾಲಕಿಯ ತಾಯಿ ಮಗಳನ್ನು ಯಾರೊ ಅಪಹರಿಸಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಐದು ದಿನದ ನಂತರ ಮನೆಗೆ ಬಂದ ಬಾಲಕಿ ತಾಯಿಯ ಮುಂದೆ ನಡೆದ ಘಟನೆಯನ್ನು ತಿಳಿಸಿದ್ದಾಳೆ. ಆಘಾತಕ್ಕೊಳಗಾದ ತಾಯಿ ಪೊಲೀಸರಿಗೆ ಮತ್ತೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಸಂತ್ರಸ್ತೆಯ ಹೇಳಿಕೆಯ ಮೇರೆಗೆ ಮೂವರು ಆರೋಪಿಗಳನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News