425 ಕೋಟಿ ರೂ. ಮೌಲ್ಯದ 60.18 ಎಕರೆ ಸರಕಾರಿ ಭೂಮಿ ವಶ
ಬೆಂಗಳೂರು, ಮೇ 27: ಬೆಂಗಳೂರು ಪೂರ್ವ ತಾಲೂಕು, ಬೆಂಗಳೂರು ದಕ್ಷಿಣ ತಾಲೂಕಿನ ವಿವಿಧೆಡೆ ಒತ್ತುವರಿ ಮಾಡಿಕೊಂಡಿದ್ದ 425 ಕೋಟಿ ರೂ. ಮೌಲ್ಯದ 60.18 ಎಕರೆ ಜಮೀನನ್ನು ವಶಪಡಿಸಿಕೊಳ್ಳುವಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದ ತಂಡ ಯಶಸ್ವಿಯಾಗಿದೆ.
ಬೆಂಗಳೂರು ಪೂರ್ವ ತಾಲೂಕಿನ ಬಿದರ ಹಳ್ಳಿ ಹೋಬಳಿ, ಹಿರಂಡಹಳ್ಳಿ ಗ್ರಾಮದ ಸರ್ವೇನಂ.95ರಲ್ಲಿ 2.23ಎಕರೆ, ನಿಂಬೆಕಾಯಿಪುರ ಗ್ರಾಮದ ಸರ್ವೇ ನಂ.1ರಲ್ಲಿ 4ಗುಂಟೆ, ಲಘಮೇನಹಳ್ಳಿ ಗ್ರಾಮದ ಸರ್ವೇ ನಂ.22ರಲ್ಲಿ 1.22 ಎಕರೆ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದವರಿಂದ ತೆರವುಗೊಳಿಸಲಾಯಿತು.
ಅದೇ ರೀತಿಯಲ್ಲಿ ದಕ್ಷಿಣ ತಾಲೂಕಿನ ಕೊತ್ತನೂರು ಗ್ರಾಮಕ್ಕೆ ದಾಳಿ ಮಾಡಿದ ಜಿಲ್ಲಾಧಿಕಾರಿ ನೇತೃತ್ವದ ತಂಡ ಸುಮಾರು 57.9 ಹಾಗೂ ಕುಂಬಳಗೂಡು ಗ್ರಾಮದ ಸರ್ವೇ ನಂ.86ರಲ್ಲಿ ನಿವೃತ್ತ ಜಿಲ್ಲಾಧಿಕಾರಿಯ ಮಗ ವೇಣುಗೋಪಾಲ್ ಒತ್ತುವರಿ ಮಾಡಿಕೊಂಡಿದ್ದ 8ಎಕರೆ ಜಾಗವನ್ನು ವಶಪಡಿಸಿಕೊಳ್ಳಲಾಯಿತು.
ಈ ಕಾರ್ಯಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಕಾಂತರಾಜು, ಉಪವಿಭಾಗಾಧಿಕಾರಿ ರಂಗನಾಥ, ತಹಶೀಲ್ದಾರ್ ಎನ್.ತೇಜಸ್‌ಕುಮಾರ್ ಮತ್ತಿತರ ಅಧಿಕಾರಿಗಳಿದ್ದರು.