ಘೋಷಣೆ ನಿಷೇಧದ ರಾಜಕೀಯ!, ಕೆಲಸದ ಸಾಕ್ಷಿಗೆ ಪೊಲೀಸರ ಸೆಲ್ಫಿ!

Update: 2017-05-29 18:51 GMT

ಕರ್ನಾಟಕದಲ್ಲಿ ಬೆಳಗಾವಿಯ ಗಡಿವಿವಾದದ ಜೊತೆ ‘ಜೈ ಮಹಾರಾಷ್ಟ್ರ’ ಘೋಷಣೆಗೆ (ವಿಧಾನಮಂಡಲ ಅಧಿವೇಶನದ ಸಮಯದ) ನಿಷೇಧದ ವಿವಾದವು ಕಳೆದವಾರ ಮುಂಬೈಯಲ್ಲಿ ಮರಾಠಿ ಅಸ್ಮಿತೆಯ ಛಾಪು ಬೀರುವವರಿಗೆ ಹೊಸ ಅಸ್ತ್ರ ಸಿಕ್ಕಿದಂತಾಯಿತು. ಶಿವಸೇನೆ-ಮನಸೇ ಜೊತೆಗೆ ಕಾಂಗ್ರೆಸ್ ಶಾಸಕ ನಿತೇಶ್ ರಾಣೆಯ ಸಂಘಟನೆ ‘ಸ್ವಾಭಿಮಾನ್ ಪಾರ್ಟಿ’ಯ ಕಾರ್ಯಕರ್ತರಿಗೂ ಇದರಿಂದ ಪ್ರಚಾರ ಪಡೆಯಲು ಸಾಧ್ಯವಾಯಿತು. ಸದ್ಯಕ್ಕೆ ಬಂದ್ ಇರುವ ಕರ್ನಾಟಕ ಸಂಘ, ಮುಂಬೈ ಕಟ್ಟಡದ ಸಂಘದ ಬೋರ್ಡ್ ಮೇಲೆ ಸ್ವಾಭಿಮಾನ್ ಪಾರ್ಟಿಯ ಕಾರ್ಯಕರ್ತರು ‘ಜೈ ಮಹಾರಾಷ್ಟ್ರ’ ಬರೆದು ಅದನ್ನು ವಾಟ್ಸ್‌ಆ್ಯಪ್‌ನಲ್ಲಿ ಹಾಕಿ ಮಹಾಸಾಧನೆ ಮಾಡಿದಂತೆ ಮರಾಠಿ ಪ್ರೇಮದ ಫೋಸ್ ನೀಡಿದ್ದು ಇಲ್ಲಿನ ಒಂದೆರಡು ಪತ್ರಿಕೆಗಳಲ್ಲಿ ವರದಿಯಾಗಿದೆ.

(ಕಪ್ಪುಮಸಿ ಕೇವಲ ಮರಾಠಿಯಲ್ಲಿ ಬರೆದ ಬೋರ್ಡ್‌ಗೆ!) ವಾಸ್ತವವಾಗಿ ಕರ್ನಾಟಕ ಸಂಘ, ಮುಂಬೈ ಕಚೇರಿ ನೂತನ ಕಟ್ಟಡದ ನೆಪದಲ್ಲಿ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದೆ! ಕರ್ನಾಟಕದ ಸಚಿವ ರೋಶನ್ ಬೇಗ್ ಅವರು ‘‘ವಿಧಾನ ಮಂಡಲದ ಅಧಿವೇಶನ ಅಥವಾ ಸಾರ್ವಜನಿಕ ಸಭೆಗಳಲ್ಲಿ ಜನಪ್ರತಿನಿಧಿಗಳು ಅಥವಾ ನಗರ ಸೇವಕರು ‘ಜೈ ಮಹಾರಾಷ್ಟ್ರ’ ಅಥವಾ ಕರ್ನಾಟಕ ಸರಕಾರದ ವಿರೋಧವಾಗಿ ಘೋಷಣೆ ಕೂಗಿದರೆ ಅವರ ಸ್ಥಾನವನ್ನು ರದ್ದುಗೊಳಿಸಲಾಗುವುದು’’ ಎಂದಿರುವ ಹೇಳಿಕೆ ಮುಂಬೈ ಸಹಿತ ಮಹಾರಾಷ್ಟ್ರದ ಅನೇಕ ಕಡೆ ತೀವ್ರ ವಿರೋಧಕ್ಕೆ ಕಾರಣವಾಯಿತು.

ಬೆಳಗಾವಿಯ ಮರಾಠಿ ಭಾಷಾ ಜನರ ಆಂದೋಲನದಲ್ಲಿ ಸೇರಿಕೊಳ್ಳಲು ಮಹಾರಾಷ್ಟ್ರದ ಸಾರಿಗೆ ಮಂತ್ರಿ ದಿವಾಕರ ರಾವ್‌ತೆ ಬೆಳಗಾವಿಗೆ ಹೊರಟರೂ ಫಲ ಕಾಣದೆ ಹೋಗಿ ವಾಪಾಸು ಬಂದರು. ಕಾರಣ - ಬೆಳಗಾವಿ ಜಿಲ್ಲಾಧಿಕಾರಿಯವರ ನೋಟಿಸ್‌ನಿಂದಾಗಿ ಪ್ರವೇಶ ಸಿಗಲಿಲ್ಲ. ಬಿಜೆಪಿ ಸಂಸದ ವಿನಯ್ ಸಹಸ್ರಭುದೆ ಈ ಸಂಗತಿಯನ್ನು ಸಂಸತ್‌ನಲ್ಲಿ ಎತ್ತುವುದಾಗಿ ಹೇಳಿದರು.

ಈಗ ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದಕ್ಕೆ ಮತ್ತೆ ಜೀವ ಬಂದಂತಾಗಿದೆ. ಈ ಪ್ರಕರಣದಿಂದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕರ್ನಾಟಕ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದು ‘‘ಯಾರಿಗೂ ‘ಜೈ ಮಹಾರಾಷ್ಟ್ರ’ ಎನ್ನುವ ಸಾಂವಿಧಾನಿಕ ಹಕ್ಕನ್ನು ತಡೆಯಲು ಸಾಧ್ಯವಿಲ್ಲ’’ ಎನ್ನುತ್ತಾ ‘‘ಕರ್ನಾಟಕಕ್ಕೆ ನೀರು, ವಿದ್ಯುತ್ ಮತ್ತು ಸ್ವಾಸ್ಥ್ಯ ಸೌಲಭ್ಯಗಳನ್ನು ಮಹಾರಾಷ್ಟ ಒದಗಿಸುತ್ತಿದೆ ಎಂದು ನೆನಪಿರಲಿ’’ ಎಂದಿದ್ದಾರೆ.

ರೋಶನ್ ಬೇಗ್ ಹೇಳಿಕೆ ವಿರೋಧಿಸುವುದಕ್ಕಾಗಿ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ತನ್ನ ಇಬ್ಬರು ಪ್ರಮುಖ ಮಂತ್ರಿಗಳಾದ ದಿವಾಕರ್ ರಾವ್‌ತೆ ಮತ್ತು ದೀಪಕ್ ಸಾವಂತ್‌ರನ್ನು ಬೆಳಗಾವಿಗೆ ತೆರಳಿ ‘ಜೈ ಮಹಾರಾಷ್ಟ್ರ’ ಘೋಷಣೆ ಕೂಗಿ ಬನ್ನಿ ಎಂದು ಕಳುಹಿಸಿದ್ದು, ಇವರಿಬ್ಬರೂ ಕಳೆದ ಗುರುವಾರ ಮಹಾರಾಷ್ಟ್ರ ಏಕೀಕರಣ ಸಮಿತಿಯ ವತಿಯಿಂದ ಆಯೋಜಿಸಿದ ಮರಾಠಿ ಮೋರ್ಚಾದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಆದರೆ ಜಿಲ್ಲಾಧಿಕಾರಿಯವರ ಆದೇಶದ ಕಾರಣ ಅಲ್ಲಿ ಇವರ ಕಾರ್ಯಕ್ರಮ ನಡೆಯಲಿಲ್ಲ. ದಿವಾಕರ್ ರಾವ್‌ತೆ ಬರಿಗೈಯಲ್ಲಿ ವಾಪಾಸು ಬಂದರು. ಈ ಬಗ್ಗೆ ಸಂಪಾದಕೀಯ ಬರೆದ ಶಿವಸೇನೆಯ ಮುಖವಾಣಿ ‘ಸಾಮ್ನಾ’ ‘‘ಕರ್ನಾಟಕ ಸರಕಾರದ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿಯವರು ತಮ್ಮ ‘ಬಾಹುಬಲಿ’ಗಿರಿಯನ್ನು ಪ್ರದರ್ಶಿಸಬೇಕು’’ ಎಂದಿದೆ.

‘‘ಬಾಹುಬಲಿಗಿರಿ ಕರ್ನಾಟಕದಲ್ಲಿ ತೋರಿಸಿ’’ ಎಂಬ ಶೀರ್ಷಿಕೆಯಲ್ಲಿ ‘ಸಾಮ್ನಾ’ ಸಂಪಾದಕೀಯ ಬರೆದಿದೆ. ‘‘ಮರಾಠಿ ಅಸ್ಮಿತೆಯ ವಿರುದ್ಧ ಪ್ರಹಾರ ನಡೆಸುತ್ತಿರುವ ಕರ್ನಾಟಕ ಸರಕಾರಕ್ಕೆ ಬಾಹುಬಲಿಯ ಕನಿಷ್ಠ ಟ್ರೇಲರ್ ಆದರೂ ತೋರಿಸಿ ಎಂದು ಶಿವಸೇನೆ ಕೈ ಜೋಡಿಸಿ ತಾನು ಮುಖ್ಯಮಂತ್ರಿಯವರಲ್ಲಿ ವಿನಂತಿಸುತ್ತಿದ್ದೇನೆ’’ ಎಂದಿದೆ.

‘‘ಬೆಳಗಾವಿಯಲ್ಲಿ ಕರ್ನಾಟಕ ಸರಕಾರ ಪ್ರತಿದಿನ ಮರಾಠಿಗರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಆದರೆ ಮಹಾರಾಷ್ಟ್ರದ ದುರ್ಬಲ ಮರಾಠಿ ಸರಕಾರ ಕನ್ನಡಿಗರ ದಮನಕ್ಕೆ ಮೌನ ವಹಿಸಿದೆ’’ ಎಂದು ಕೆರಳಿಸುವ ಪ್ರಯತ್ನ ಶಿವಸೇನೆ ಮಾಡುತ್ತಿದೆ. ‘‘ಕರ್ನಾಟಕ ವಿಧಾನ ಸಭೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಾಸಕರಿದ್ದಾರೆ. ಬೆಳಗಾವಿ ಮನಪಾದಲ್ಲಿ ಮರಾಠಿ ಜನರ ಭಗವಾಧ್ವಜ ಹಾರುತ್ತಿದೆ. ಹಾಗಿರುವಾಗ ‘ಜೈ ಮಹಾರಾಷ್ಟ್ರ’ ಹೇಳುವುದಕ್ಕೆ ರೋಶನ್ ಬೇಗ್ ಹೇಗೆ ನಿಷೇಧಿಸಿದ್ದಾರೆ? ಸಂವಿಧಾನ ನೀಡಿದ ಅಧಿಕಾರವಿದು. ಆದರೆ ಕರ್ನಾಟಕ ಮಂತ್ರಿ ಆ ಅಧಿಕಾರಕ್ಕೆ ಉಗುಳಿದ್ದಾರೆ. ಈಗ 60-65 ವರ್ಷಗಳಿಂದ ಇರುವ ಗಡಿವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಹಾಗಾಗಿ ಇದು ನ್ಯಾಯಾಲಯದ ಅವಮಾನ’’ ಎಂದು ಶಿವಸೇನೆ ಬರೆದಿದೆ. ‘‘ಅನ್ಯ ರಾಜ್ಯಗಳಿಗೆ ಅಲ್ಲಿಯ ಜನರು ಜೈ ಜೈಕಾರ ಹೇಳುವುದು ಸಂವಿಧಾನದ ದೃಷ್ಟಿಯಿಂದ ಹೇಗೆ ಅಪರಾಧ? ಇದು ರಾಷ್ಟ್ರೀಯ ಏಕತೆಗೆ ಧಕ್ಕೆ ತರುವ ಸಂಗತಿ’’ ಎಂದು ಶಿವಸೇನೆ ಕೆರಳಿಸಿದೆ.

‘‘ಬೆಳಗಾವಿ ಗಡಿವಿವಾದದ ಬಗ್ಗೆ ಯಾವ ಪ್ರಮುಖ ರಾಜಕೀಯ ಪಕ್ಷಗಳೂ ಮಾತಾಡುವುದಿಲ್ಲ. ಕೇವಲ ಶಿವಸೇನೆ ಮಾತ್ರ ಹೋರಾಟ ಮಾಡುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಹಲವು ಸಮಸ್ಯೆಗಳಿವೆ. ಅಲ್ಲ್ಲಿ ಇತರ ಪಕ್ಷಗಳೂ ಆ ಬಗ್ಗೆ ಧ್ವನಿಗೂಡಿಸುತ್ತವೆ. ಆದರೆ ಬೆಳಗಾವಿ ಗಡಿ ವಿವಾದದ ಬಗ್ಗೆ ಕೇವಲ ಶಿವಸೇನೆ ಮಾತ್ರ ಮಾತಾಡುವ ಸ್ಥಿತಿ ಇದೆ. ಇಲ್ಲಿ ಪ್ರಾದೇಶಿಕ ಪಕ್ಷಗಳ ಅಗತ್ಯ ಮನಗಾಣಬೇಕಾಗಿದೆ’’ ಎನ್ನುತ್ತಿದೆ’’ ಶಿವಸೇನೆ.

‘‘ಮುಂಬೈಯಲ್ಲಿ ಎಲ್ಲ ರಾಜ್ಯಗಳ ಜನರು ವಾಸಿಸುತ್ತಾರೆ. ಉತ್ತರ ಪ್ರದೇಶದಲ್ಲಿ ರಾಜ್‌ಭವನದಲ್ಲಿ ಮಹಾರಾಷ್ಟ್ರ ದಿನ ಆಚರಿಸುತ್ತಾರೆ. ಸ್ವತಹ ಮುಖ್ಯಮಂತ್ರಿ ಅದರಲ್ಲಿ ಉಪಸ್ಥಿತರಿರುತ್ತಾರೆ. ಮುಂಬೈ ಸಹಿತ ಮಹಾರಾಷ್ಟ್ರದ ಅನೇಕ ಕಡೆ ಕನ್ನಡ ಸಂಘ ಸಂಸ್ಥೆಗಳಿವೆ. ಅವರ ಸಂಸ್ಕೃತಿ - ಭಾಷಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇದನ್ನು ಯಾರೂ ತಡೆಯುವುದಿಲ್ಲ. ಯಾವುದೇ ರಾಜ್ಯ ಅಥವಾ ಭಾಷೆ ಪರಸ್ಪರ ವೈರಿಗಳಲ್ಲ. ಹಾಗಿರುವಾಗ ಕರ್ನಾಟಕ ಮಂತ್ರಿ ರೋಶನ್ ಬೇಗ್‌ಗೆ ‘ಜೈ ಮಹಾರಾಷ್ಟ್ರ’ ಘೋಷಣೆ ಯಾಕೆ ಬೇಕಿಲ್ಲ?’’ ಎಂದು ಸಂಪಾದಕೀಯದ ಕೊನೆಗೆ ಸವಾಲು ಹಾಕಿದೆ.

ಮುಂಬೈಯಲ್ಲಿ ಬೆಳಗಾವಿ ಗಡಿ ವಿವಾದ ಕಂಡಾಗಲೆಲ್ಲ ಶಿವಸೇನೆ ಇಲ್ಲಿಯೂ ಕನ್ನಡಿಗರಿದ್ದಾರೆ ಎಂಬ ಮಾತು ಹೇಳುತ್ತಾ ಬಂದಿದೆ. ಆದರೆ ಇತ್ತೀಚಿನ ದಶಕಗಳಲ್ಲಿ ಅದು ಕನ್ನಡಿಗರ ತಂಟೆಗೆ ಕೈಹಾಕಿಲ್ಲ. ಕೇವಲ ಮಾತಲ್ಲೇ ಗುರ್ ಗುರ್ ಅನ್ನುತ್ತದೆ ಅಷ್ಟೇ. ಆದರೆ ಈ ಬಾರಿ ಇನ್ನೊಂದು ಸಂಘಟನೆಯು ತಾನೂ ಜೀವಂತ ಇದ್ದೇನೆ ಎಂದು ತೋರಿಸಿಕೊಳ್ಳಲು ಈ ಅವಕಾಶದ ಲಾಭ ಎತ್ತಿಕೊಂಡಿದ್ದು, ಮಾಟುಂಗಾದಲ್ಲಿರುವ ಕರ್ನಾಟಕ ಸಂಘದ ಬೋರ್ಡ್ ಮೇಲೆ ‘ಜೈ ಮಹಾರಾಷ್ಟ್ರ’ ಬರೆದು ಸುದ್ದಿ ಮಾಡಲು ನೋಡಿತು. ಆದರೆ ಮರುದಿನವೇ ಅದನ್ನು ಸಂಘವು ಅಳಿಸಿ ಹಾಕಿತು. ಹಾಗೂ ಕರ್ನಾಟಕ ಸಂಘ ಬೋರ್ಡ್ ಎಂದಿನಂತೆ ಕಾಣಿಸುವಂತೆ ಮಾಡಲಾಯಿತು. (ಆನಂತರ ಈ ತನಕ ಯಾರೂ ಬಂದಿಲ್ಲ!)

ಇತ್ತ ಥಾಣೆಯಲ್ಲಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ನಗರ ಅಧ್ಯಕ್ಷ ಅವಿನಾಶ್ ಜಾಧವ್‌ರ ನೇತೃತ್ವದಲ್ಲಿ ಥಾಣೆಯಿಂದ ಕರ್ನಾಟಕದತ್ತ ತೆರಳುವ ರಾಜ್ಯ ಸಾರಿಗೆ ಬಸ್ಸುಗಳ ಮೇಲೆ ‘ಜೈ ಮಹಾರಾಷ್ಟ್ರ’ ಬರೆದರು. ಥಾಣೆ ನಗರದ ಖೋಪಟ್ ಬಸ್ ಡಿಪೋದಲ್ಲಿ ಬೆಳಗಾವಿಯಿಂದ ಬಂದ ಬಸ್ಸಿನ ಮೇಲೂ ‘ಜೈ ಮಹಾರಾಷ್ಟ್ರ’ ಬರೆದು ಪ್ರತಿಭಟಿಸಿದರು.
ಆದರೆ ಇಂತಹ ಕೃತ್ಯಗಳಿಗೆ ಕನ್ನಡಿಗರು ಆತಂಕಪಡಬೇಕಿಲ್ಲ. ಹಾಗೆ ನೋಡಿದರೆ ಥಾಣೆಯ ನೂತನ ಮೇಯರ್ ಶಿವಸೇನೆಯ ಮೀನಾಕ್ಷಿ ಶಿಂದೆ (ಮೀನಾಕ್ಷಿ ಪೂಜಾರಿ) ಅವರು ತುಳುವರು. ಪತಿ ಮರಾಠಿಯವರಾದ್ದರಿಂದ ಈಗ ಶಿಂದೆ. ತುಳು-ಕನ್ನಡಿಗರು ಇತ್ತೀಚೆಗೆ ಅವರಿಗೆ ಅದ್ದೂರಿಯ ಸನ್ಮಾನ ಕೂಡಾ ಮಾಡಿದ್ದಾರೆ. ಹಾಗಾಗಿ ಶಿವಸೇನೆಯಿಂದ ಅಂತಹ ಬೆದರಿಕೆ ಕನ್ನಡಿಗರಿಗೆ ಬರಲಾರದು! ‘ಜೈ ಮಹಾರಾಷ್ಟ್ರ’ ಬರೆದ ಮಾತ್ರಕ್ಕೆ ಏನೂ ಆಗದು!
* * *

ಟ್ರಾಫಿಕ್ ಪೊಲೀಸರಿಗೆ ಸೆಲ್ಫಿ ರೂಲ್
ಮುಂಬೈಯ ಟ್ರಾಫಿಕ್ ಪೊಲೀಸರಿಗೆ ಇನ್ನು ಮುಂದೆ ಡ್ಯೂಟಿಯ ಸಾಕ್ಷಿ ನೀಡಬೇಕಾಗಿದೆ. ಇದರಂತೆ ದಿನದಲ್ಲಿ ಇಂತಹ ಪೊಲೀಸರು ಡ್ಯೂಟಿಯ ಸಂದರ್ಭದಲ್ಲಿ 5 ಬಾರಿ ಸೆಲ್ಫಿ ಪಡೆದು ಡ್ಯೂಟಿಯ ಜಾಗದಲ್ಲಿರುವ ಸಾಕ್ಷಿ ಅಧಿಕಾರಿಗಳಿಗೆ ನೀಡಬೇಕಾಗುವುದು. ಸೆಲ್ಫಿ ರೂಲ್ ಟ್ರಾಫಿಕ್ ಪೊಲೀಸರ ಡಿಸಿಪಿ ಸೌರಭ್ ತ್ರಿಪಾಠಿ ತಂದಿದ್ದಾರೆ. ಟ್ರಾಫಿಕ್ ಪೊಲೀಸರು ಸೆಲ್ಫಿ ತೆಗೆದು ಅಫೀಶಿಯಲ್ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಕಳುಹಿಸಬೇಕಾಗಿದೆ.

ಡಿ.ಸಿ.ಪಿ. ಸೌರಭ್ ತ್ರಿಪಾಠಿಯವರು ಹೇಳಿದಂತೆ ಸೆಲ್ಫಿ ಕಳುಹಿಸು ವುದರಿಂದ ಆ ಪೊಲೀಸರ ಸರಿಯಾದ ಲೊಕೇಶನ್‌ನ ಮಾಹಿತಿ ತಿಳಿಯುತ್ತದೆಯಂತೆ. ಪೊಲೀಸರಿಗೆ ಬೆಳಗ್ಗೆ 9ಗಂಟೆ, 11 ಗಂಟೆ, 1-2 ಗಂಟೆಯ ನಡುವೆ ಮತ್ತು ಸಂಜೆ 5ರಿಂದ 8 ಗಂಟೆಯ ನಡುವೆ ಎರಡು ಸಲ ಕಳುಹಿಸಬೇಕಾಗಿದೆ. ಆದರೆ ಡಿ.ಸಿ.ಪಿ.ಯವರ ಇಂತಹ ನಿಯಮದ ಮೇಲೆ ಪೊಲೀಸ್‌ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ಕೇಳಿಬರುತ್ತಿದೆ.

ಒಬ್ಬರು ಇನ್‌ಸ್ಪೆಕ್ಟರ್ ಹೇಳುತ್ತಾರೆ. ‘‘ನನಗೀಗ 56 ವರ್ಷ. ಬಹಳ ಕಷ್ಟದಲ್ಲಿ ಸ್ಮಾರ್ಟ್ ಫೋನ್‌ನ್ನು ಬಳಸುತ್ತಿದ್ದೇನೆ. ಸೆಲ್ಫಿಯನ್ನು ಸರಿಯಾಗಿ ತೆಗೆಯಲು ನನಗೆ ಬರುವುದಿಲ್ಲ. ಈ ಸೆಲ್ಫಿ ರೂಲ್ ನಮಗೆ ಕಷ್ಟವಾಗಲಿದೆ’’ ಎಂದಿದ್ದಾರೆ.
‘‘ಬೆಳಗ್ಗೆ ಸಂಜೆ ಟ್ರಾಫಿಕ್ ವಿಪರೀತವಿರುತ್ತದೆ. ಇಂತಹ ಸ್ಥಿತಿಯಲ್ಲಿ ಸ್ಮಾರ್ಟ್ ಫೋನ್ ಹಿಡಿದು ಸೆಲ್ಫಿ ತೆಗೆಯುವಷ್ಟು ಬಿಡುವು ಕೂಡಾ ಸಿಗುವುದಿಲ್ಲ’’ ಎಂದು ಇನ್ನು ಕೆಲವರ ಆರೋಪವಾಗಿದೆ.
* * *

ಮಳೆಗಾಲಕ್ಕಾಗಿ ಸೆಟೆಲೈಟ್ ಫೋನ್ ಸೌಲಭ್ಯ
ಮಳೆಗಾಲದಲ್ಲಿ ಯಾವುದೇ ರೀತಿಯ ತುರ್ತು ಸ್ಥಿತಿಯಲ್ಲಿ ಪ್ರಭಾವಿ ರೀತಿಯಿಂದ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಮುಂಬೈ - ನವಿಮುಂಬೈ ಪಕ್ಕದ ರಾಯಗಡ ಆಡಳಿತವು ಸೆಟೆಲೈಟ್ ಫೋನ್‌ನ ಸೌಲಭ್ಯ ನೀಡಲಿದೆ. ಮಳೆಗಾಲದ ನಾಲ್ಕು ತಿಂಗಳ ಕಾಲ ತುರ್ತು ಸ್ಥಿತಿಯಲ್ಲಿ ಕೆಲವೊಮ್ಮೆ ಮೊಬೈಲ್ ಮತ್ತು ಲ್ಯಾಂಡ್‌ಲೈನ್ ಫೋನ್ ಕೆಲಸ ಸರಿಯಾಗಿ ನಿರ್ವಹಿಸುವುದಿಲ್ಲ. ಮೊಬೈಲ್ ಫೋನ್‌ಗಳಿಗೆ ಮಳೆಗಾಲದಲ್ಲಿ ಸಿಗ್ನಲ್ ಸರಿಯಾಗಿ ಸಿಗುವುದಿಲ್ಲ. ಮರಗಳು ಉರುಳಿ ಬೀಳುವ ಕಾರಣವೂ ಲ್ಯಾಂಡ್‌ಲೈನ್ ಫೋನ್ ಬಂದ್ ಆಗುತ್ತದೆ. ಹೀಗಾಗಿ ರಾಯ್‌ಗಡ್ ಜಿಲ್ಲಾ ಆಡಳಿತ ಮಳೆಗಾಲದ ನಾಲ್ಕು ತಿಂಗಳು ಆಗಬಹುದಾದ ಅನಾಹುತಗಳನ್ನು ಎದುರಿಸಲು ಈಗಿಂದೀಗಲೇ ಸಿದ್ಧತೆ ನಡೆಸಿದೆ.

ಮುಂಬೈ ಮತ್ತು ನವಿಮುಂಬೈಗೆ ಪಕ್ಕದ ಸಮುದ್ರ ತೀರದಲ್ಲಿರುವ ರಾಯ್‌ಗಡ್‌ಗೆ 81272 ಮತ್ತು 81273 ಕ್ರಮಾಂಕದ ಸೆಟ್‌ಲೈಟ್ ಫೋನ್ ದೊರೆತಿದೆ. ಈ ಸೆಟ್‌ಲೈಟ್ ಫೋನ್ ಮಾಧ್ಯಮದಿಂದ ಸ್ಥಗಿತಗೊಂಡಿರುವ ಇಂಟರ್‌ನೆಟ್ ಸೌಲಭ್ಯವನ್ನು ಪುನ: ಆರಂಭಿಸಬಹುದಾಗಿದೆ. ಸೆಟೆಲೈಟ್ ಫೋನ್‌ನ್ನು 16 ಕಂಪ್ಯೂಟರ್‌ಗಳಿಗೆ ಇಂಟರ್‌ನೆಟ್‌ನಿಂದ ಜೋಡಿಸಲಾಗುತ್ತದೆಯಂತೆ.

Writer - ಶ್ರೀನಿವಾಸ ಜೋಕಟ್ಟೆ

contributor

Editor - ಶ್ರೀನಿವಾಸ ಜೋಕಟ್ಟೆ

contributor

Similar News

ಸಂವಿಧಾನ -75