ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಪ್ರಸ್ತಾವನೆ

Update: 2017-05-30 14:07 GMT

ಬೆಂಗಳೂರು, ಮೇ 30: ಆಡಳಿತರೂಢ ಕಾಂಗ್ರೆಸ್ ಪಕ್ಷವು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕೋರಿ ವಿಧಾನಪರಿಷತ್ ಕಾರ್ಯದರ್ಶಿ ಶ್ರೀನಿವಾಸ್‌ಗೆ ಪ್ರಸ್ತಾವನೆ ಸಲ್ಲಿಸಿದೆ.

ಮಂಗಳವಾರ ಮಧ್ಯಾಹ್ನ ವಿಧಾನಸೌಧದಲ್ಲಿ ವಿಧಾನಪರಿಷತ್ ಕಾರ್ಯದರ್ಶಿ ಶ್ರೀನಿವಾಸ್‌ಗೆ ಆಡಳಿತ ಪಕ್ಷದ ಮುಖ್ಯಸಚೇತಕ ಐವಾನ್ ಡಿಸೋಜಾ, ಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ಅಬ್ದುಲ್ ಜಬ್ಬಾರ್, ಪ್ರಸನ್ನಕುಮಾರ್ ಸೇರಿದಂತೆ ಇನ್ನಿತರರು ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಗೆ ಪ್ರಸ್ತಾವನೆ ಸಲ್ಲಿಸಿದರು.

ಶಂಕರಮೂರ್ತಿ ಬಿಜೆಪಿಯ ಪ್ರತಿನಿಧಿ. ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅವರ ಕಾರ್ಯವೈಖರಿ ಅಸಮಾಧಾನ ತಂದಿದೆ. ಅವರ ವಿರುದ್ಧ ಮಂಡಿಸ ಲಾಗಿರುವ ಅವಿಶ್ವಾಸ ನಿರ್ಣಯಕ್ಕೆ ಕಾರಣಗಳನ್ನು ಸದನದ ಮುಂದಿಡಲಾಗುವುದು ಎಂದು ವಿ.ಎಸ್.ಉಗ್ರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಶಂಕರಮೂರ್ತಿ ಸದನದ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕೋರಿ ನೋಟಿಸ್ ನೀಡಲಾಗಿದೆ. 14 ದಿನದೊಳಗೆ ಸದನದಲ್ಲಿ ನಿರ್ಣಯ ಪ್ರಸ್ತಾವನೆಯಾಗಲಿದೆ ಎಂದು ಅವರು ಹೇಳಿದರು.

ಸಭಾಪತಿ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸದನದಲ್ಲಿ ಮತಗಳ ಕೊರತೆ ಕುರಿತು ಪ್ರತಿಕ್ರಿಯಿಸಿದ ಉಗ್ರಪ್ಪ, ಸದನದಲ್ಲಿ ಅವಿಶ್ವಾಸ ನಿರ್ಣಯ ಪ್ರಸ್ತಾವನೆ ಮಂಡನೆಯಾದ ಬಳಿಕ ಬಲಾಬಲ ತಿಳಿಯಲಿದೆ. ಅವಿಶ್ವಾಸ ನಿರ್ಣಯ ಮಂಡನೆಗೆ ಕಾರಣವೇನು ಎಂದು ಗೊತ್ತಾದರೆ ನಮಗೆ ಜೆಡಿಎಸ್ ಬೆಂಬಲ ಸಿಗುವ ಸಾಧ್ಯತೆಯಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಪರಿಷತ್ತಿನ ಸಭಾನಾಯಕ ಡಾ.ಜಿ. ಪರಮೇಶ್ವರ್ ಸೂಚನೆಯಂತೆ ನಾವು ಸಭಾಪತಿ ವಿರುದ್ಧ ನೋಟಿಸ್ ನೀಡಿದ್ದೇವೆ. ಮುಂದಿನ ಸಭಾಪತಿ ಯಾರಾಗಬೇಕು ಎಂಬುದರ ಕುರಿತು ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಆದರೆ, ನಾನು ಸಭಾಪತಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಉಗ್ರಪ್ಪ ಹೇಳಿದರು.

ನನ್ನ ಸ್ಥಾನಕ್ಕೆ ಧಕ್ಕೆ ಇಲ್ಲ

ಕಾಂಗ್ರೆಸ್ ಸದಸ್ಯರು ಯಾವ ಕಾರಣಕ್ಕೆ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದಾರೋ ಗೊತ್ತಿಲ್ಲ. ನನ್ನ ಸ್ಥಾನಕ್ಕೆ ಯಾವುದೆ ಧಕ್ಕೆ ಆಗಲ್ಲ. ನೋಟಿಸ್ ನೀಡಿರುವ ಬಗ್ಗೆ ನನ್ನ ಯಾವುದೆ ಆಕ್ಷೇಪಣೆ ಇಲ್ಲ. ಅವಿಶ್ವಾಸ ನಿರ್ಣಯ ಮಂಡನೆಗೆ ನೋಟಿಸ್ ನೀಡುವ ಅಧಿಕಾರ ಎಲ್ಲ ಸದಸ್ಯರಿಗೆ ಇದೆ. ನಿಯಮ 165 ಪ್ರಕಾರ ಮುಂದಿನ ಪ್ರಕ್ರಿಯೆಗಳು ನಡೆಯುತ್ತವೆ. ಬಿಜೆಪಿ ಹಾಗೂ ಜೆಡಿಎಸ್ ಒಡಂಬಂಡಿಕೆಯಂತೆ ನಾನು ಸಭಾಪತಿ ಆಗಿದ್ದೇನೆ. ಸದ್ಯದ ಮಟ್ಟಿಗೆ ನಮಗೆ ಅಗತ್ಯ ಬೆಂಬಲವಿದೆ. ಕಾನೂನಿನ ಪ್ರಕಾರ ನಾನು ನಡೆದುಕೊಳ್ಳುತ್ತೇನೆ. ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ.

-ಡಿ.ಎಚ್.ಶಂಕರಮೂರ್ತಿ ಸಭಾಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News