ಗೋ ಹತ್ಯೆ ನಿಷೇಧ ಕ್ರಮವನ್ನು ಖಂಡಿಸಿ ಪ್ರತಿಭಟನೆ: ಮಾರ್ಗ ಮಧ್ಯೆದಲ್ಲೇ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

Update: 2017-06-02 14:38 GMT

   ಬೆಂಗಳೂರು, ಜೂ 2:ಕೇಂದ್ರ ಸರಕಾರದ ಗೋ ಹತ್ಯೆ ನಿಷೇಧ ಕ್ರಮವನ್ನು ಖಂಡಿಸಿ ಪ್ರತಿಭಟಿಸಲು ಮುಂದಾದ ದಲಿತ ಮತ್ತು ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಗೋ ಹತ್ಯೆ ನಿಷೇಧ ಕ್ರಮವನ್ನು ಖಂಡಿಸಿ ಶುಕ್ರವಾರ ನಗರದ ಟೌನ್‌ಹಾಲ್ ಮುಂಭಾಗ ಪ್ರತಿಭಟನೆಗೆ ಮುಂದಾದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ ಹಾಗೂ ಸ್ವರಾಜ್ ಅಭಿಯಾನ್ ಸೇರಿದಂತೆ ಇತರ ಜನಪರ ಸಂಘಟನೆಗಳ ಕಾರ್ಯಕರ್ತರನ್ನು ಮಾರ್ಗ ಮಧ್ಯೆದಲ್ಲೇ ಪೊಲೀಸರು ವಶಕ್ಕೆ ಪಡೆದರು.

ಟೌನ್ ಹಾಲ್‌ಗೆ ಸಂಪರ್ಕಿಸುವ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಗರದ ಹಡ್ಸನ್ ವೃತ್ತದಿಂದ ಟೌನ್‌ಹಾಲ್‌ನತ್ತ ಸಾಗುತ್ತಿದ್ದ 50ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ವಶಕ್ಕೆ ಪಡೆಯುವ ಮೂಲಕ ಪ್ರತಿಭಟನೆಯ ಕಾವನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು.

ಬಹುಸಂಖ್ಯಾತರ ಆಹಾರದ ಹಕ್ಕಿನ ಮೇಲೆ ಸರ್ಜಿಕಲ್ ದಾಳಿ: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವ ಮೂಲಕ ಬಹು ಸಂಖ್ಯಾತರ ಆಹಾರದ ಹಕ್ಕಿನ ಮೇಲೆ ಕೇಂದ್ರ ಸರಕಾರ ಸರ್ಜಿಕಲ್ ದಾಳಿ ನಡೆಸಲು ಮುಂದಾಗಿದೆ ಎಂದು ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ಸಂಚಾಲಕ ಮೋಹನ್‌ರಾಜ್ ವಾಗ್ದಾಳಿ ನಡೆಸಿದರು.

  ಶುಕ್ರವಾರ ಪುರಭವನದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಹಿಂದೂ ರಾಷ್ಟ್ರೀಯತೆಯ ಕಲ್ಪನೆಯ ಆಧಾರದ ಮೇಲೆ ಗೋ ಹತ್ಯೆ ನಿಷೇಧವನ್ನು ಜಾರಿಗೊಳಿಸಲು ಕೇಂದ್ರಸರಕಾರ ಹವಣಿಸುತ್ತಿದೆ. ಇಂತದ್ದೇ ಆಹಾರವನ್ನು ಸೇವಿಸಬೇಕು ಎಂದು ಬಲವಂತವಾಗಿ ಜನರ ಮೇಲೆ ಹೇರುವುದನ್ನು ಸಂವಿಧಾನ ಒಪ್ಪುವುದಿಲ್ಲ. ಇದು ಸಂವಿಧಾನ ಬಾಹಿರ ಕೃತ್ಯ ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

  ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸುವಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು. ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈ ಕ್ರಮದ ವಿರುದ್ಧ ರಾಜ್ಯಾದ್ಯಂತ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

  ದಲಿತ್ ಕ್ರಿಶ್ಚಿಯನ್ ಸಂಘಟನೆಯ ಅಧ್ಯಕ್ಷ ರೆವರೆಂಡ್ ಚಂದ್ರಪ್ರಸಾದ್ ಮಾತನಾಡಿ, ಬಹುಸಂಖ್ಯಾತರ ಹಕ್ಕನ್ನು ಅಡಗಿಸಲು ನಡೆಸುತ್ತಿರುವ ಕೇಂದ್ರ ಸರಕಾರದ ಷಡ್ಯಂತ್ರ ಇದು.ಗೋ ಹತ್ಯೆ ನಿಷೇಧ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News