ಕೇಂದ್ರೀಕೃತ ಅಡುಗೆ ವಿರೋಧಿ ಜೂ.7ಕ್ಕೆ ಬಿಸಿಯೂಟ ನೌಕರರ ಪ್ರತಿಭಟನೆ
ಬೆಂಗಳೂರು, ಜೂ. 5: ಬಿಸಿಯೂಟ ಯೋಜನೆಯನ್ನು ‘ಕೇಂದ್ರೀಕೃತ ಅಡುಗೆ’ ವ್ಯಾಪ್ತಿಯಲ್ಲಿ ತರಲು ಉದ್ದೇಶಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಸ ನೌಕರರ ಸಂಘಟನೆಯಿಂದ ಜೂ.7 ರಂದು ಸಂಸದರ ಮನೆ ಮುಂದೆ ಧರಣಿ ಮತ್ತು ಜೂ.13 ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸರಕಾರದ ಎಂಎಚ್‌ಆರ್‌ಡಿ ಇಲಾಖೆಯ ನೂತನ ಕಾರ್ಯದರ್ಶಿಗಳು ಪೂರ್ವಯೋಜಿತ ಚರ್ಚೆ ನಡೆಸದೇ ಏಕಾಏಕಿ ಅಧಿಕಾರ ಸ್ವೀಕರಿಸದ ಕೆಲವೇ ದಿನಗಳಲ್ಲಿ ಕೇಂದ್ರೀಕೃತ ಅಡುಗೆ ತಯಾರಿಸಲು ನೇರವಾದ ತಿದ್ಧುಪಡಿಗೆ ಸಹಿ ಮಾಡಿದ್ದಾರೆ. ಇದರಿಂದ ಸಾವಿರಾರು ಮಹಿಳೆಯರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಅಲ್ಲದೆ, ಈ ನೀತಿಯನ್ನು ವಿರೋಧಿಸಬೇಕಾದ ರಾಜ್ಯ ಸರಕಾರ ಕೇಂದ್ರದ ನಿಯಮಕ್ಕೆ ಬೆಂಬಲ ವ್ಯಕ್ತಪಡಿಸಿದೆ ಎಂದು ಸಂಘದ ಅಧ್ಯಕ್ಷೆ ವರಲಕ್ಷ್ಮಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಕ್ಕಳ ಹಾಜರಾತಿ ಹೆಚ್ಚಿಸಲು, ಮಧ್ನಾಹ್ನದ ನಂತರದ ಚಟುವಟಿಕೆಯಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸುವ ಉದ್ದೇಶದಿಂದ 2001ರಲ್ಲಿ ಸುಪ್ರಿಂ ಕೋರ್ಟ್‌ನ ಆದೇಶದಂತೆ ಅಂದಿನ ಕೇಂದ್ರ ಸರಕಾರ ಬಿಸಿಯೂಟ ಯೋಜನೆಯನ್ನು ಜಾರಿ ಮಾಡಲಾಗಿದೆ.ಇದಕ್ಕಾಗಿ ಕೇಂದ್ರದಿಂದ 1,900 ಕೋಟಿ ರೂ.ಹಾಗೂ ರಾಜ್ಯ ಸರಕಾರ 1,300 ಕೋಟಿ ರೂ.ಗೂ ಅಧಿಕ ಹಣವನ್ನು ವಾರ್ಷಿಕ ಖರ್ಚು ಮಾಡುತ್ತಿತ್ತು. ಆದರೆ, 2013ರಲ್ಲಿ ಕೇಂದ್ರದಲ್ಲಿ ಸರಕಾರ ಬದಲಾದ ನಂತರ ಬಿಸಿಯೂಟ ಸೇರಿದಂತೆ ಹಲವು ಸಾಮಾಜಿಕ ಕಲ್ಯಾಣ ಯೋಜನೆಗಳ ಅನುದಾನ ವೆಚ್ಚವನ್ನು ಕಡಿತ ಮಾಡಲು ಮುಂದಾಗಿದೆ ಎಂದರು.
2012 ರಲ್ಲಿ ಕೇಂದ್ರ ಸರಕಾರ ತ್ರಿಪಕ್ಷೀಯ ಸಮಿತಿಯಿಂದ ಐಎಲ್‌ಸಿ ಭಾರತೀಯ ಕಾರ್ಮಿಕ ಸಮ್ಮೇಳನದಲ್ಲಿ ಬಿಸಿಯೂಟ ಯೋಜನೆಯಲ್ಲಿ ದುಡಿಯುವ ಮಹಿಳೆಯರನ್ನು ಸರಕಾರಿ ಕೆಲಸಗಾರರು ಎಂದು ಗುರುತಿಸಿ, ಕನಿಷ್ಟ ವೇತನ ಹಾಗೂ ಸಾಮಾಜಿಕ ಭದ್ರತೆ ನೀಡಬೇಕು ಎಂದು ನಿರ್ದೇಶನ ನೀಡಿದೆ. ಆದರೆ, ಇದನ್ನು ಜಾರಿ ಮಾಡಲು ಕೇಂದ್ರ ಸರಕಾರ ಮುಂದಾಗಿಲ್ಲ. ಅಲ್ಲದೆ, ಬಿಸಿಯೂಟ ಯೋಜನೆಗೆ ಖರ್ಚು ಅಧಿಕವಾಗುತ್ತಿದೆ ಎಂಬ ನೆಪವೊಡ್ಡಿ ಇದನ್ನು ಖಾಸಗೀಕರಣ ಮಾಡುವ ಹುನ್ನಾರ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರೀಕೃತ ಅಡಿಗೆ ಕೇಂದ್ರಗಳನ್ನು ಖಾಸಗಿಯವರಿಗೆ ಒಪ್ಪಿಸುವುದರಿಂದ ಮಹಿಳೆಯರು ಕೆಲಸ ಕಳೆದುಕೊಳ್ಳುವುದರ ಜೊತೆಗೆ 40-50 ಶಾಲೆಗಳಿಗೆ ಒಂದು ಸ್ಥಳದಿಂದ ಆಹಾರ ಸರಬರಾಜು ಮಾಡಲಾಗುತ್ತದೆ. ಇದು ಬಿಸಿಯೂಟ ಯೋಜನೆಯ ಮೂಲ ಉದ್ದೇಶಕ್ಕೆ ಹೊಡೆತ ಬೀಳಲಿದೆ. ಆದುದರಿಂದ ಕೇಂದ್ರ ಸರಕಾರ ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಬಿಸಿಯೂಟ ಯೋಜನೆಯಲ್ಲಿ ಯಾವುದೇ ಅವಘಡಗಳಿಗೆ ಅವಕಾಶ ನೀಡದೇ ಉತ್ತಮವಾಗಿ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಹೀಗಾಗಿ ಸರಕಾರ ಕೇಂದ್ರ ನಿಯಮ ತಿದ್ಧುಪಡಿ ಅಂಗೀಕರಿಸಿ ಒಪ್ಪಿಗೆ ಸೂಚಿಸಿರುವುದನ್ನು ಹಿಂಪಡೆಯಬೇಕು ಎಂದರು.
ಜೂ.7 ರಂದು ಎಲ್ಲ ಸಂಸದರ ಮನೆ ಮುಂದೆ ಧರಣಿ ನಡೆಸಿ ಮನವರಿಕೆ ಮಾಡಿಕೊಡಲಾಗುತ್ತದೆ. ಜೊತೆಗೆ, ವಿಧಾನಸೌಧ ಚಲೋ ಮೂಲಕ ರಾಜ್ಯ ಸರಕಾರ ತೀರ್ಮಾನವನ್ನು ಖಂಡಿಸಲಾಗುತ್ತದೆ ಎಂದು ಅವರು ತಿಳಿಸಿದರು.