ಬೆಳೆ ವಿಮೆ ಯೋಜನೆ ಪರಿಷ್ಕರಣೆಗೆ ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು, ಜೂ. 8: ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯನ್ನು ಪ್ರತಿಯೊಬ್ಬ ರೈತರಿಗೆ ಪ್ರಯೋಜನವಾಗುವಂತೆ ಪರಿಷ್ಕರಣೆ ಮಾಡಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಕೆಪಿಸಿಸಿಯ ಕಿಸಾನ್ ಕೇತ್ ಮಜ್ದೂರ್ ಕಾಂಗ್ರೆಸ್‌ನ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗುರುವಾರ ನಗರದ ದಂಡು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯನ್ನು ಕೇವಲ ಉದ್ಯಮಿಗಳಿಗೆ ಲಾಭ ತರುವಂತೆ ರೂಪಿಸಲಾಗಿದೆ. ಕೂಡಲೆ ಬೆಳೆ ವಿಮೆ ಯೋಜನೆಯನ್ನು ಪರಿಷ್ಕರಿಸಿ ಎಲ್ಲ ರೈತರಿಗೂ ಅನುಕೂಲವಾಗುವಂತೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಉದ್ಯಮಿ, ಶ್ರೀಮಂತರ ಪರ ಇರುವ ಕೇಂದ್ರ ಸರಕಾರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲು ನಿರ್ಲಕ್ಷ ವಹಿಸಿದೆ. ಬೆಲೆ ಕುಸಿತ, ಬರ ಇನ್ನಿತರ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಗೋರಕ್ ಸಿಂಗ್ ವರದಿಯಂತೆ ದೇಶದ ಎಲ್ಲಾ ಭಾಗದಲ್ಲಿನ ಅಡಿಕೆ ಬೆಳೆಗಾರರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಅಡಿಕೆ ಹಾನಿಕಾರಕವಲ್ಲ ಎಂಬ ವರದಿಯನ್ನು ಸುಪ್ರೀಂಕೋರ್ಟ್‌ಗೆ ಶೀಘ್ರವೇ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರಕಾರದ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಗುಂಡು ಹಾರಿಸಿ 6 ಮಂದಿಯನ್ನು ಕೊಲೆ ಮಾಡಲಾಗಿದೆ. ರೈತರ ಮೇಲೆ ಗೋಲಿಬಾರ್ ನಡೆಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಷಯವಾಗಿದೆ. ರೈತ ವಿರೋಧಿ ಧೋರಣೆ ನಡೆಸುತ್ತಿರುವ ಮಧ್ಯಪ್ರದೇಶದ ಬಿಜೆಪಿ ಸರಕಾರದ ವಿರುದ್ಧ ಕೇಂದ್ರ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.