ಕೇಂದ್ರ-ರಾಜ್ಯ ಸರಕಾರದ ವಿರುದ್ಧ ಗಾಯಾಳು ವಿದ್ಯಾರ್ಥಿನಿಯಿಂದ ನ್ಯಾಯಾಂಗ ನಿಂದನೆ ಅರ್ಜಿ
ಬೆಂಗಳೂರು,ಜೂ.11: ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಪರಿಹಾರ ನೀಡದ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಗಾಯಾಳು ವಿದ್ಯಾರ್ಥಿನಿ ಲೀಷಾ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದಾರೆ.
ಹೈಕೋರ್ಟ್ ಸೂಚನೆ ನೀಡಿದ್ದರೂ ಪರಿಹಾರವನ್ನು ಸರಿಯಾಗಿ ನೀಡದ ಸರಕಾರದ ಕ್ರಮ ಪ್ರಶ್ನಿಸಿ ಗಾಯಾಳು ಲೀಷಾ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 2016ರ ಅಕ್ಟೋಬರ್‌ನಲ್ಲಿ ಸರಕಾರಿ ಉದ್ಯೋಗ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಜೊತೆಗೆ ಪರಿಹಾರ ನೀಡುವ ಕುರಿತು ಕೇಂದ್ರ ಸರಕಾರಕ್ಕೂ ಸೂಚನೆ ನೀಡಿತ್ತು. ಆದರೂ ಈವರೆಗೆ ನ್ಯಾಯಾಲಯದ ಆದೇಶವನ್ನು ಸರಕಾರ ಪಾಲಿಸಿಲ್ಲ ಎಂದು ಲೀಷಾ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
2013ರ ಎ.17ರಂದು ಬೆಳಗ್ಗೆ ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಈ ಸಂದರ್ಭದಲ್ಲಿ ಕಾಲೇಜಿಗೆ ಹೋಗುತ್ತಿದ್ದ ಲೀಷಾ ಗಾಯಗೊಂಡಿದ್ದರು. ಕಬ್ಬಿಣದ ಚೂರುಗಳು ಅವರ ಎಡಗಾಲಿಗೆ ಹೊಕ್ಕಿತ್ತು. ಇದುವರೆಗೂ ಅವರು ಸುಮಾರು 7 ಲಕ್ಷ ರೂ.ಗಳನ್ನು ಶಸ್ತ್ರ ಚಿಕಿತ್ಸೆಗಾಗಿ ಖರ್ಚು ಮಾಡಿದ್ದಾರೆ. ಆದರೆ, ಇನ್ನೂ ಗುಣಮುಖರಾಗಿಲ್ಲ.