ಜಿಎಸ್ಟಿ ವಿಧೇಯಕ: ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ

Update: 2017-06-15 16:44 GMT

ಬೆಂಗಳೂರು, ಜೂ. 15:ಏಕರೂಪ ತೆರಿಗೆ ಪದ್ಧತಿ ಜಾರಿಗೊಳಿಸುವ ಮಹತ್ವದ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ(ಎಸ್‌ಜಿಎಸ್‌ಟಿ)ವನ್ನು ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ಸರ್ವಾನುಮತದಿಂದ ಅಂಗೀಕಾರ ನೀಡಲಾಯಿತು.

ಗುರುವಾರ ವಿಧಾನಸಭೆಯಲ್ಲಿ ಶಾಸನ ರಚನೆ ಅವಧಿಯಲ್ಲಿ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ಧರಾಮಯ್ಯ ವಿಧೇಯಕವನ್ನು ಮಂಡಿಸಿದರು. ತೆರಿಗೆ ಸರಳೀಕರಣ ಗೊಳಿಸುವಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೆ ಮುಂದಿದ್ದು, ಆ ವಿಚಾರದಲ್ಲಿ ಪ್ರಗತಿಪರ ರಾಜ್ಯ. ಸರಕು ಮತ್ತು ಸೇವಾ ತೆರಿಗೆ ವಿಧೇಯಕ ಯುಪಿಎ ಸರಕಾರದ ಕೂಸು. ಹೀಗಾಗಿ ವಿರೋಧಿಸುವ ಪ್ರಶ್ನೆಯೆ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ 2011ರಲ್ಲೆ ಯುಪಿಎ ಸರಕಾರ ಜಿಎಸ್‌ಟಿ ವಿಧೇಯಕ ಮಂಡನೆಗೆ ಸಿದ್ದತೆ ನಡೆಸಿತ್ತು. ಆ ವೇಳೆ ಗುಜರಾತ್, ಮಧ್ಯಪ್ರದೇಶ ಹಾಗೂ ತಮಿಳುನಾಡು ಸರಕಾರಗಳು ವಿರೋಧಿಸಿದ್ದವು. ಇದೀಗ ಜಿಎಸ್‌ಟಿ ಕಾನೂನು ಜಾರಿಗೆ ಅವರೇ ಮುಂದಾಗಿದ್ದಾರೆ ಎಂದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್ಟಿ ಕಾಯ್ದೆಗೆ ಪೂರಕವಾಗಿ ವಿಧೇಯಕವನ್ನು ಮಂಡಿಸಲಾಗಿದೆ. ಇಲ್ಲಿ ನಡೆಯುವ ಚರ್ಚೆಗಳಿಂದ ಬದಲಾವಣೆಗಳು ಅಸಾಧ್ಯ. ಆದರೂ, ಇಲ್ಲಿನ ವ್ಯಕ್ತವಾದ ಅಭಿಪ್ರಾಯಗಳನ್ನು ಜಿಎಸ್ಟಿ ಮಂಡಳಿ ಸಭೆಯಲ್ಲಿ ಕೇಂದ್ರದ ಗಮನಕ್ಕೆ ತರಲಾಗುವುದು ಎಂದು ಸ್ಪಷ್ಟಣೆ ನೀಡಿದರು.

ಆರಂಭಕ್ಕೆ ವಿಧೇಯಕದ ಕುರಿತು ಮಾತನಾಡಿದ ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಒಂದು ರಾಷ್ಟ್ರ ಒಂದು ತೆರಿಗೆ ಪರಿಕಲ್ಪನೆಗೆ ವಿಧೇಯಕದ ಕುರಿತು ವರ್ತಕರಲ್ಲಿ ಇನ್ನೂ ಗೊಂದಲವಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಅಲ್ಲದೆ, ವರ್ತಕರಲ್ಲಿನ ಎಲ್ಲ ಪ್ರಶ್ನೆಗಳಿಗೆ ಸರಕಾರ ಉತ್ತರ ನೀಡಬೇಕೆಂದು ಕೋರಿದರು.ಕೊಬ್ಬರಿ ಮತ್ತು ಒಣದ್ರಾಕ್ಷಿ ಮೇಲೆ ಹೆಚ್ಚಿನ ಪ್ರಮಾಣದ ತೆರಿಗೆ ವಿಧಿಸಿದ್ದು, ಅದನ್ನು ಇಳಿಕೆ ಮಾಡಬೇಕೆಂದು ಜೆಡಿಎಸ್ ಸದಸ್ಯ ಎಂ.ಟಿ.ಕೃಷ್ಣಪ್ಪ, ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ, ಆಡಳಿತ ಪಕ್ಷದ ಶಿವಾನಂದ ಪಾಟೀಲ್ ಸೇರಿದಂತೆ ಇನ್ನಿತರರು ಇದೇ ವೇಳೆ ಒತ್ತಾಯಿಸಿದರು.

ಕೇಂದ್ರ ಸಚಿವರ ಅಭಿನಂದನೆ: ಜಿಎಸ್ಟಿ ನೋಂದಣಿಯಲ್ಲಿ ರಾಜ್ಯ ದೇಶದಲ್ಲೇ ಮೊದಲನೆ ಸ್ಥಾನದಲ್ಲಿದೆ. ಜಿಎಸ್ಟಿ ಜಾರಿಗೆ ಪೂರ್ವ ಸಿದ್ಧತೆ ಕೈಗೊಳ್ಳುವಲ್ಲಿ ರಾಜ್ಯ ನಂಬರ್ 1 ಸ್ಥಾನದಲ್ಲಿದೆ ಎಂದು ಕೇಂದ್ರ ಹಣಕಾಸು ಸಚಿವರೇ ಅಭಿನಂದಿಸಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.

ಏಕ ರೂಪ ತೆರಿಗೆ ಪದ್ಧತಿ ಜಾರಿಗೆ ತರುವ ಮಹತ್ವದ ಕರ್ನಾಟಕ ಸರಕು ಮತ್ತು ಸೇವೆಗಳ ವಿಧೇಯಕಕ್ಕೆ ವಿಧಾನಸಭೆ ಎಲ್ಲ ಸದಸ್ಯರು ಸರ್ವಾನುಮತದ ಅನುಮೋದನೆ ನೀಡಬೇಕು ಎಂದು ಸಿದ್ಧರಾಮಯ್ಯ ಕೋರಿದರು.

ಬಳಿಕ ಸ್ಪೀಕರ್ ಕೆ.ಬಿ.ಕೋಳಿವಾಡ ವಿಧೇಯಕವನ್ನು ಮತಕ್ಕೆ ಹಾಕಿ ಧ್ವನಿಮತದ ಮೂಲಕ ಅಂಗೀಕಾರ ದೊರಕಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News