ಅಧಿಕಾರದ ಹಿಂದೆ ಬೀಳದ ಅಪರೂಪದ ರಾಜಕಾರಣಿ: ಬಿ.ಎಲ್.ಶಂಕರ್

Update: 2017-06-16 16:00 GMT

ಬೆಂಗಳೂರು ಜೂ.16: ರಾಜಕಾರಣದಲ್ಲಿ ಅಜಾತಶತ್ರು ಎಂದು ಗುರುತಿಸಿಕೊಂಡಿದ್ದ ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ನಾಲ್ಕು ಸದನಗಳಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಸಂಸದೀಯ ಪಟು ಆಗಿದ್ದರು ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಪ್ರಶಂಸಿಸಿದ್ದಾರೆ.

ಶುಕ್ರವಾರ ನಗರದ ಗಾಂಧಿ ಭವನದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಜೆ.ಎಚ್.ಪಟೇಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಿ.ಬಿ.ಚಂದ್ರೇಗೌಡರು ಐದು ದಶಕಗಳ ಕಾಲ ರಾಜಕೀಯ ಜೀವನದಲ್ಲಿದ್ದರೂ ಯಾವುದೇ ಅಧಿಕಾರದ ಬೆನ್ನ ಹಿಂದೆ ಬಿದ್ದವರಲ್ಲ. ಸಚಿವ, ಪ್ರತಿಪಕ್ಷನಾಯಕ, ಆಡಳಿತ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿರುವ ಅವರು ಸಜ್ಜನಿಕೆ, ಸರಳತೆಯ ರಾಜಕಾರಣಿ. ರಾಜ್ಯ ರಾಜಕಾರಣದಲ್ಲಿ ಅಪರೂಪ ಸಾಧನೆ ಮಾಡಿ ನೇಪಥ್ಯಕ್ಕೆ ಸೇರಿದ್ದವರನ್ನು ಸ್ಮರಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್‌ರು ರಾಜಕಾರಣವೇ ಬೇರೆ. ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಧೇಯಕಗಳನ್ನು ಪಾಸು ಮಾಡುತ್ತಿದ್ದ ನಿಪುಣತೆ ಪಟೇಲ್‌ರಲ್ಲಿತ್ತು. ಅವರಲ್ಲಿನ ಪ್ರತಿಭೆ, ಅನುಭವ, ಪಾಂಡಿತ್ಯ ಡಿ.ಬಿ.ಚಂದ್ರೇಗೌಡ ಅವರಲ್ಲಿದೆ ಎಂದರು.

ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಜೆ.ಎಚ್.ಪಟೇಲ್‌ರು ಯುವಕರಿಗೆ ಜವಾಬ್ದಾರಿಯನ್ನು ಕೊಟ್ಟು ನಾಯಕತ್ವ ಗುಣಗಳನ್ನು ಬೆಳೆಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಗುಣವುಳ್ಳವರು ಇಲ್ಲ. ಹರಿದು ಹಂಚಿಹೋಗಿರುವ ಜನತಾ ಪರಿವಾರದ ನಾಯಕರು ಒಂದಾದರೆ ಅವರನ್ನು ಇಂದು ಎದುರಿಸುವ ಶಕ್ತಿ ಯಾವುದೇ ಪಕ್ಷಕ್ಕೆ ಇಲ್ಲ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News