ಪ್ರಶಸ್ತಿ ಕೆಎಸ್‌ಎನ್ ಕನ್ನಡ ಮಿಲ್ಟನ್: ಡಾ.ಜಿ.ವೆಂಕಟಸುಬ್ಬಯ್ಯ

Update: 2017-06-17 15:49 GMT

ಬೆಂಗಳೂರು, ಜೂ.17: ಜೀವನದ ಕೊನೆಯ ದಿನಗಳಲ್ಲಿ ದೃಷ್ಟಿ ಕಳೆದುಕೊಂಡರೂ ಕಾವ್ಯ ರಚನೆಯನ್ನು ನಿಲ್ಲಿಸದ ಕವಿ ಕೆ.ಎಸ್.ನರಸಿಂಹಸ್ವಾಮಿ ಕನ್ನಡದ ಮಿಲ್ಟನ್ ಆಗಿದ್ದಾರೆ ಎಂದು ನಿಘಂಟು ತಜ್ಞ ಡಾ.ಜಿ.ವೆಂಕಟಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಎಚ್.ಎನ್.ಸಭಾಂಗಣಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಆಯೋಜಿಸಿದ್ದ ಕೆ.ಎಸ್.ನರಸಿಂಹಸ್ವಾಮಿ ಪ್ರಶಸ್ತಿಯನ್ನು ಕವಿ ಕೆ.ಎಸ್.ನಿಸಾರ್ ಅಹಮದ್ ಮತ್ತು ಕೆ.ಎಸ್.ಎನ್.ಕಾವ್ಯಗಾಯನ ಪ್ರಶಸ್ತಿಯನ್ನು ಗಾಯಕಿ ರತ್ನಮಾಲಾ ಪ್ರಕಾಶ್ ಅವರಿಗೆ ಪ್ರಧಾನಿಸಿ ಅವರು ಮಾತನಾಡಿದರು.

ಕವಿ ನರಸಿಂಹಸ್ವಾಮಿ ಅವರ ಕೊನೆಯ ದಿನಗಳಲ್ಲಿ ಕಣ್ಣು ಕರುಡಾಗಿದ್ದರಿಂದ ಕಾವ್ಯ ರಚನೆ ಮಾಡಲು ಬಹಳ ಕಷ್ಟಪಟ್ಟರು.ಆದರೂ ಕವಿತೆ ರಚನೆಯನ್ನು ನಿಲ್ಲಿಸಲಿಲ್ಲ. ಎಂ.ವಿ.ವೆಂಕಟೇಶ್‌ಮೂರ್ತಿ ಅವರ ಸಹಾಯದಿಂದ ಹಲವು ಕವಿತೆಗಳನ್ನು ರಚಿಸಿ ಕನ್ನಡದ ಮಿಲ್ಟನ್ ಆದರು ಎಂದರು.

ಗೋಪಾಲಕೃಷ್ಣ ಅಡಿಗರು ‘ಪುಷ್ಪಕವಿಯ ಪರಾಕು’ ಎಂಬ ವ್ಯಂಗ್ಯ ಕವನಕ್ಕೆ ಕೆಎಸ್‌ಎನ್ ಬೇಸರಗೊಂಡಿದ್ದರು. ಇದರಿಂದ ಮಾನಸಿಕ ಖಿನ್ನತೆಗೂ ಒಳಗಾಗಿದ್ದರು.1960ರಲ್ಲಿ ಹೊರ ಬಂದ ಮನೆಯಿಂದ ಮನೆಗೆ ಕವನ ಸಂಕಲನ ನಂತರ 16 ವರ್ಷಗಳ ಕಾಲ ಯಾವುದೇ ಕಾವ್ಯ ಸಂಕಲನಗಳನ್ನು ಕೆಎಸ್‌ನ ಪ್ರಕಟಿಸಿಲ್ಲ. ಈ ಸಮಯದಲ್ಲಿ ಸಾಕಷ್ಟು ಕವನಗಳನ್ನು ರಚಿಸಿದ್ದರು. ಈ ಹಸ್ತ ಪತ್ರಿಕೆಯನ್ನು ಪಡೆದು ತೆರೆದ ಬಾಗಿಲು ಕವನ ಸಂಕಲನವನ್ನು 1976ರಲ್ಲಿ ಒತ್ತಾಯ ಮಾಡಿ ಮುದ್ರಿಸಿದ್ದೆ. ಈ ಕವನ ಸಂಕಲನ ದಾಖಲೆಯ ಮಾರಾಟವಾಗಿದ್ದಲ್ಲದೇ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನವೂ ಲಭಿಸಿತ್ತು ಎಂದು ಸ್ಮರಿಸಿದರು.

ನಂತರ ಮೈಸೂರು ಮಲ್ಲಿಗೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕವನ ಸಂಕಲನಗಳು ಪ್ರಕಟಗೊಂಡವು. ಕೆಎಸ್‌ಎನ್ ಬದುಕಿರುವವರಿಗೂ ನಾಡಿನಲ್ಲಿ ಆದರ್ಶ ಕವಿಯಾಗಿ ಮೆರೆದರು. ಕಣ್ಣು ದೃಷ್ಟಿ ಕಳೆದುಕೊಂಡ ನಂತರ ‘‘ಕಣ್ಣು ಹೋಗಿದ್ದರೂ ಕವಿತೆ ನಿಲ್ಲಲೇ ಇಲ್ಲ; ಒಳಗಣ್ಣ ಮುಂದೆ ನಾನು ನನ್ನ ಕವಿತೆಯನ್ನು ಕಂಡೆ, ಕವಿತೆ ಸಾವಿರ ಕಣ್ಣ ತೆರೆದು ಕಂಡಿತು ನನ್ನ.’’ ಎಂಬ ಕವಿತೆಯನ್ನು ಮನೋಜ್ಞವಾಗಿ ರಚಿಸಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಕೆಎಸ್‌ನ ಟ್ರಸ್ಟ್‌ನ ಅಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News