ರೈತರಿಗೆ ಮಣ್ಣಿನ ಆರೋಗ್ಯ ಚೀಟಿ: ಕೃಷ್ಣಭೈರೇಗೌಡ

Update: 2017-06-19 16:10 GMT

ಬೆಂಗಳೂರು, ಜೂ.19: ರೈತರ ಜಮೀನಿನ ಮಣ್ಣಿನ ಆರೋಗ್ಯದ ಗುಣಲಕ್ಷಣಗಳನ್ನು ತಿಳಿಸುವಂತಹ ಮಣ್ಣಿನ ಆರೋಗ್ಯದ ಚೀಟಿಗಳನ್ನು ಸರಕಾರದ ಖರ್ಚಿನಲ್ಲೆ ನೀಡಲಾಗುವುದು. ಈಗಾಗಲೆ ಸುಮಾರು 17 ಲಕ್ಷ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ 2017-18ನೆ ಸಾಲಿನ ಕೃಷಿ ಇಲಾಖೆಯ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರವನ್ನು ನೀಡುತ್ತಿದ್ದೇವೆ ಎಂದರು.

ರೈತರಿಗೆ ಪ್ರಮಾಣೀಕೃತ ಬೀಜಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ರೈತರಿಗೆ ಕೃಷಿ ಚಟುವಟಿಕೆಗಳ ಕುರಿತು ಸಂಪೂರ್ಣ ಮಾಹಿತಿ ಒದಗಿಸಲು ಅಧಿಕಾರಿಗಳ ನಡಿಗೆ-ರೈತರ ಕಡೆಗೆ ಎಂಬ ‘ಕೃಷಿ ಅಭಿಯಾನ’ವನ್ನು ಆರಂಭಿಸಿದ್ದೇವೆ. ಕೃಷಿ ಅಭಿಯಾನದಲ್ಲಿ 14 ಲಕ್ಷ ರೈತರು ಭಾಗಿಯಾಗಿದ್ದಾರೆ. ತಂತ್ರಜ್ಞಾನದ ನೆರವಿನೊಂದಿಗೆ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಜುಲೈ 29ಕ್ಕೆ ಕೃಷಿ ಇಲಾಖೆಯಲ್ಲಿ ಖಾಲಿಯಿರುವ 609 ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. ಅದೇ ರೀತಿ ತೋಟಗಾರಿಕೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡ ಲಾಗುವುದು ಎಂದು ಕೃಷ್ಣಭೈರೇಗೌಡ ತಿಳಿಸಿದರು.

ತಂತ್ರಜ್ಞಾನವನ್ನು ಬಳಸಿಕೊಂಡು ಸುಮಾರು 25 ಲಕ್ಷ ರೈತರಿಗೆ ಎಸ್‌ಎಂಎಸ್ ಮೂಲಕ ವಾರಕ್ಕೆ ಎರಡು ವಾರಿ ಹವಾಮಾನ ಮುನ್ಸೂಚನೆಯ ಮಾಹಿತಿಯನ್ನು ನೀಡಲಾಗುತ್ತಿದೆ. 5-6 ಲಕ್ಷ ರೈತರ ವಾಟ್ಸಪ್ ಗ್ರೂಪ್‌ಗಳನ್ನು ರಚಿಸಿ, ಅವುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಭಾವಚಿತ್ರಗಳು, ಸಂದೇಶಗಳು, ವಿಡಿಯೋ ತುಣುಕುಗಳನ್ನು ಹಾಕಲಾಗುತ್ತಿದೆ ಎಂದು ಅವರು ಹೇಳಿದರು.

ಸಾವಯವ ಕೃಷಿಯೊಂದಿಗೆ ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ರಾಗಿ ಮತ್ತು ಜೋಳವನ್ನು 18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಇನ್ನುಳಿದಂತೆ ಸಜ್ಜೆ, ನವಣೆಯನ್ನು 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ರಾಗಿ ಮತ್ತು ಜೋಳವನ್ನು ರೈತರು ಎಷ್ಟೇ ಬೆಳೆದರೂ ಅದನ್ನು ಸರಕಾರ ಖರೀದಿಸಲಿದೆ. ಅದನ್ನು ಪಡಿತರ ವ್ಯವಸ್ಥೆಯ ಮೂಲಕ ಜನರಿಗೆ ಉಚಿತವಾಗಿ ನೀಡುತ್ತೇವೆ. ಈ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ 1700 ರೂ.ಗಳ ಜೊತೆಗೆ 400 ರೂ.ಗಳನ್ನು ಶಾಶ್ವತ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ಸರಕಾರ ನಿರ್ಧರಿಸಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News