ಮುಖ್ಯಮಂತ್ರಿಗೆ ರೈತರು-ಶಾಸಕರಿಂದ ಅಭಿನಂದನೆ
ಬೆಂಗಳೂರು, ಜೂ. 22: ಭೀಕರ ಸ್ವರೂಪದ ಬರ ಸ್ಥಿತಿ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರು ಸಹಕಾರಿ ಬ್ಯಾಂಕುಗಳ ಮೂಲಕ ಪಡೆದ 50 ಸಾವಿರ ರೂ. ವರೆಗಿನ ಕೃಷಿ ಸಾಲಮನ್ನಾ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರೈತರು, ಶಾಸಕರು ಸೇರಿದಂತೆ ಹಲವು ಮಂದಿ ಅಭಿನಂದಿಸಿದ್ದಾರೆ.
ಗುರುವಾರ ನಗರದಲ್ಲಿರುವ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ರೈತರು ಮತ್ತು ಕಾಂಗ್ರೆಸ್ ಪಕ್ಷದ ಶಾಸಕರು ಸಿದ್ದರಾಮಯ್ಯನವರನ್ನು ಅಭಿನಂದಿಸಿದರು. ಬಳಿಕ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಚುನಾವಣಾ ಪ್ರಣಾಳಿಕೆಯಲ್ಲಿ ರೈತ ಸಾಲಮನ್ನಾ ಆಶ್ವಾಸನೆ ನೀಡಿರಲಿಲ್ಲ. ಬಜೆಟ್‌ನಲ್ಲಿಯೂ ಪ್ರಕಟಿಸಿರಲಿಲ್ಲ. ಆದರೆ, ರೈತರ ಸಂಕಷ್ಟ ಅರಿತು ಸಾಲಮನ್ನಾ ಘೋಷಣೆ ಮಾಡಲಾಗಿದೆ ಎಂದರು.
50 ಸಾವಿರ ರೂ.ವರೆಗಿನ ಕೃಷಿ ಸಾಲ ಮನ್ನಾದಿಂದ ರಾಜ್ಯದ ಬೊಕ್ಕಸಕ್ಕೆ 8,165 ಕೋಟಿ ರೂ. ಹೊರೆಯಾಗಲಿದೆ. ಆದುದರಿಂದ 50 ಸಾವಿರ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಸಾಲಮನ್ನಾ ಅಸಾಧ್ಯ. ಮುಂಬರುವ ದಿನಗಳಲ್ಲಿ ಈ ಬಗ್ಗೆ ಆಲೋಚಿಸುತ್ತೇವೆ ಎಂದು ಭರವಸೆ ನೀಡಿದರು.
ಮುಖಂಡರಾದ ಎಸ್.ಮನೋಹರ್, ಯೋಜನಾ ಮಂಡಳಿ ಸದಸ್ಯ ಜಿ. ಜನಾರ್ಧನ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ರಕ್ಷಿತ್, ರಾಮಕೃಷ್ಣ, ಆನಂದ್, ಶೇಖರ್, ಶಂಕರ್ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
‘ರೈತರ ಕೃಷಿ ಸಾಲಮನ್ನಾ ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಶಾಸಕರಾದ ಪುಟ್ಟರಂಗಶೆಟ್ಟಿ, ವಸಂತ ಬಂಗೇರ, ಜಿ.ಟಿ. ಪಾಟೀಲ್ ಸೇರಿದಂತೆ ಇನ್ನಿತರರು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಅಭಿನಂದಿಸಿದರು’