11 ಸಾವಿರ ಪೌರ ಕಾರ್ಮಿಕರು ಶೀಘ್ರದಲ್ಲೇ ಖಾಯಂ:ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಜೂ.23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸೇರಿದಂತೆ ರಾಜ್ಯದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 11ಸಾವಿರ ಪೌರ ಕಾರ್ಮಿಕರನ್ನು ಶೀಘ್ರದಲ್ಲೇ ಖಾಯಂಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಬೇಡಿಕೆಗಳ ಸಂಬಂಧ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ಮಂದಿ ಪೌರಕಾರ್ಮಿಕರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಿಬಿಎಂಪಿಯಲ್ಲಿ 4 ಸಾವಿರ ಸೇರಿದಂತೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿನ 6 ಸಾವಿರ ಪೌರ ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಆ ಎಲ್ಲ ಪೌರಕಾರ್ಮಿಕರನ್ನು ಮೊದಲ ಹಂತದಲ್ಲಿ ಖಾಯಂಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಗುತ್ತಿಗೆ ಪೌರ ಕಾರ್ಮಿಕರಿಗೆ ಕೇವಲ ನಾಲ್ಕೈದು ಸಾವಿರ ರೂ.ವೇತನ ಸಿಗುತ್ತಿತ್ತು. ಇದೀಗ ಅವರಿಗೆ ಕನಿಷ್ಠ ವೇತನ 17ಸಾವಿರ ರೂ.ಗಳನ್ನು ನಿಗದಿಪಡಿಸಿದ್ದು, ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕವೇ ಪೌರ ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ವೇತನ ಪಾವತಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಪೌರ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ, ಬೆಳಗಿನ ಉಪಾಹಾರ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪೌರ ಕಾರ್ಮಿಕರ ಎಲ್ಲ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿದೆ ಎಂದ ಸಿದ್ದರಾಮಯ್ಯ, ಮುಂಬರುವ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪೌರಕಾರ್ಮಿಕರ ಪದ್ಧತಿಯನ್ನು ಸಂಪೂರ್ಣ ತೆಗೆದು ಹಾಕಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಪೌರಾಡಳಿತ ಸಚಿವ ಈಶ್ವರ್ ಬಿ.ಖಂಡ್ರೆ, ಸಿಎಂ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಪೊನ್ನುರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಸಂಪುಟ ಸಭೆಯಲ್ಲಿ ನಿರ್ಧಾರ
ಆಧುನಿಕ ಜೀತ ಪದ್ಧತಿಯಾಗಿರುವ ಹೊರಗುತ್ತಿಗೆ ಪದ್ಧತಿ ಸಂಪೂರ್ಣ ರದ್ದತಿಗೆ ರಾಜ್ಯ ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗುವುದು. ಈ ಸಂಬಂಧ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು. ಮೂರು ತಿಂಗಳಲ್ಲಿ ಪೌರ ಕಾರ್ಮಿಕರು ಖಾಯಂಗೊಳ್ಳಲಿದ್ದಾರೆ.
-ಎಚ್.ಆಂಜನೇಯ ಸಮಾಜ ಕಲ್ಯಾಣ ಸಚಿವ