ನೀಟ್ ಫಲಿತಾಂಶ ಪ್ರಕಟ: ಕರ್ನಾಟಕದ ಸಂಕೀರ್ತ್ ಸದಾನಂದ ನಾಲ್ಕನೆ ರ‍್ಯಾಂಕ್‌

Update: 2017-06-23 15:39 GMT

ಹೊಸದಿಲ್ಲಿ/ಬೆಂಗಳೂರು, ಜೂ.23: ಪ್ರಸ್ತುತ ಸಾಲಿನ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’(ನೀಟ್) ಫಲಿತಾಂಶ ಪ್ರಕಟಗೊಂಡಿದ್ದು, ನಗರದ ಡೆಲ್ಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಸಂಕೀರ್ತ್ ಸದಾಂದ ನಾಲ್ಕನೇ ರ‍್ಯಾಂಕ್‌ ಪಡೆದಿದ್ದಾರೆ.

   ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ್ದ ನೀಟ್ ಪರೀಕ್ಷೆಯಲ್ಲಿ ಸಂಕೀರ್ತ್ ಸದಾನಂದ ಒಟ್ಟು 700 ಅಂಕಗಳಿಗೆ 692 ಅಂಕ ಗಳಿಸಿ, 4ನೇ ರ‍್ಯಾಂಕ್‌ ಪಡೆದಿದ್ದಾರೆ. ಅದೇ ರೀತಿ, ಪಂಜಾಬ್‌ನ ನವದೀಪ್ ಸಿಂಗ್ 700ಕ್ಕೆ 697 ಅಂಕ ಪಡೆಯುವ ಮೂಲಕ ಪ್ರಥಮ ರ‍್ಯಾಂಕ್‌ ಗಳಿಸಿದ್ದು, ಮಧ್ಯಪ್ರದೇಶದ ಅರ್ಚಿತ್ ಗುಪ್ತಾ ಮತ್ತು ಮನಿಷ್ ಮುಲ್ಚಂದಾನಿ ಕ್ರಮವಾಗಿ ಎರಡು ಮತ್ತು ಮೂರನೇ ರ‍್ಯಾಂಕ್‌ ಗಳಿಸಿದ್ದಾರೆ.

ಹಾಗೆಯೇ, ಜೈನ್ ವಿವಿಯ ಪಿಯು ಕಾಲೇಜಿನ ವಿದ್ಯಾರ್ಥಿ ರಕ್ಷಿತಾ ರಮೇಶ್ 41ನೆ ರ‍್ಯಾಂಕ್‌ ಪಡೆದಿದ್ದಾರೆ. ಇವರು ಸಿಇಟಿಯಲ್ಲಿ ಭಾರತೀಯ ವೈದ್ಯಪದ್ಧತಿ ವಿಭಾಗದಲ್ಲಿ ಟಾಪರ್ ಆಗಿದ್ದರು. ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಅನ್ಸಿಕಾ ಗುಪ್ತಾ 413 ಹಾಗೂ ಸಂಜನಾ ಶ್ರೀಕಾಂತ್ 396, ಎಸ್. ಮೋಹಿ್ 271 ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ಪ್ರಸ್ತುತ ಸಾಲಿನ ಮೇ 7ರಂದು ನೀಟ್ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಪರೀಕ್ಷೆಗೆ ಒಟ್ಟು 11,38,890 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 6,11,539 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಇದರಲ್ಲಿ 2,66,221 ವಿದ್ಯಾರ್ಥಿಗಳು, 3,45,313 ವಿದ್ಯಾರ್ಥಿನಿಯರಿದ್ದಾರೆ. ದೇಶದಲ್ಲಿ ಒಟ್ಟು 470 ವೈದ್ಯಕೀಯ ಕಾಲೇಜುಗಳಿದ್ದು, 65,170 ಸೀಟುಗಳಿವೆ. 308 ದಂತ ವೈದ್ಯಕೀಯ ಕಾಲೇಜುಗಳಿದ್ದು, 25,730 ದಂತ ವೈದ್ಯಕೀಯ ಸೀಟುಗಳಿವೆ.

10 ಭಾಷೆಯಲ್ಲಿ ಪರೀಕ್ಷೆ: ಪ್ರಸ್ತುತ ಸಾಲಿನಲ್ಲಿ ಹತ್ತು ಪ್ರಾದೇಶಿಕ ಭಾಷೆಗಳಲ್ಲಿ ನೀಟ್ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಆದರೂ, ಶೇ.80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಲ್ಲೇ ಪರೀಕ್ಷೆ ಬರೆದಿದ್ದಾರೆ. ಶೇ.10ರಷ್ಟು ವಿದ್ಯಾರ್ಥಿಗಳು ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆದಿದ್ದಾರೆ. ಕನ್ನಡ ಭಾಷೆಯಲ್ಲೂ 712 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ.00.06 ಅಭ್ಯರ್ಥಿಗಳು ಮಾತ್ರವೇ ಉತ್ತೀರ್ಣರಾಗಿದ್ದಾರೆ.

  
ಟಾಪ್ 10 ವಿದ್ಯಾರ್ಥಿಗಳು
1. ನವದೀಪ್ ಸಿಂಗ್ (ಪಂಜಾಬ್)- 697 ಅಂಕ
2. ಅರ್ಚಿತ್ ಗುಪ್ತಾ (ಮಧ್ಯಪ್ರದೇಶ)- 695 ಅಂಕ
3. ಮನಿಷ್ ಮುಲ್ಚಂದಾನಿ (ಮಧ್ಯಪ್ರದೇಶ)- 695 ಅಂಕ
4. ಸಂಕೀರ್ತ್ ಸದಾನಂದ (ಕರ್ನಾಟಕ)- 692 ಅಂಕ
5. ಡೋಗ್ರಾ ಅಭಿಷೇಕ್ ವೀರೇಂದ್ರ (ಮಹಾರಾಷ್ಟ್ರ)- 691 ಅಂಕ
6. ಡೆರಿಕ್ ಜೋಸೆಫ್ (ಕೇರಳ)- 691 ಅಂಕ
7. ಕಾನಿಷ್ ತಯಾಲ್ (ಹರಿಯಾಣ)- 691 ಅಂಕ
8. ನಿಖಿತಾ ಗೋಯಲ್ (ಪಂಜಾಬ್)- 690 ಅಂಕ
9. ಆರ್ಯನ್ ರಾಜ್ ಸಿಂಗ್ (ಉತ್ತರ ಪ್ರದೇಶ)- 690 ಅಂಕ
10. ತನಿಷ್ ಬನ್ಸಾಲ್ (ಪಂಜಾಬ್)- 686 ಅಂಕ

ವಿಷಯಗಳಲ್ಲಿನ ಯಾವುದೇ ಗೊಂದಲಗಳನ್ನು ಶಿಕ್ಷಕರ ಸಹಕಾರ ಪಡೆದು ಪರಿಹರಿಸಿಕೊಳ್ಳುತ್ತಿದ್ದೆ. ವಿಷಯಗಳನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಿದ್ದೆ. ಅಂದಿನ ಪಾಠವನ್ನು ಅಂದೇ ಓದುತ್ತಿದ್ದೆ. ಮುಂದೆ ಹೃದ್ರೋಗ ತಜ್ಞ ಅಥವಾ ನರರೋಗ ತಜ್ಞನಾಗಬೇಕೆಂದುಕೊಂಡಿದ್ದೇನೆ.
-ಸಂಕೀರ್ತ್ ಸದಾನಂದ, 4ನೆ ರ‍್ಯಾಂಕ್‌, ಡೆಲ್ಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News