ಭತ್ತೆ ದುರ್ಬಳಕೆ ಆರೋಪ: ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ದೂರು
ಬೆಂಗಳೂರು, ಜೂ.24: ಸರಕಾರದಿಂದ ನೀಡಲಾಗುವ ಭತ್ತೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಆರ್.ಟಿ.ಐ ಕಾರ್ಯಕರ್ತ ಹನುಮೇಗೌಡ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಶನಿವಾರ ನಗರದ ಎಂಎಸ್ ಕಟ್ಟಡದಲ್ಲಿರುವ ಕರ್ನಾಟಕ ಲೋಕಾಯುಕ್ತ ಪ್ರಧಾನ ಕಚೇರಿನಲ್ಲಿ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಉಪಸ್ಥಿತರಿಲ್ಲದ ಕಾರಣ, ತಮ್ಮ ದೂರನ್ನು ಹನುಮೇಗೌಡ ಕೌಂಟರ್‌ನಲ್ಲಿ ನೀಡಿದ್ದಾರೆ.
ಶಂಕರಮೂರ್ತಿ, ನಕಲಿ ದಾಖಲೆ ಸೃಷ್ಟಿಸಿ ಉಡುಪಿಯಿಂದ ಬೆಂಗಳೂರಿಗೆ ಓಡಾಟದ ಭತ್ತೆ ಪಡೆದಿದ್ದಾರೆ. ಹೀಗೆ, ಸರಕಾರಕ್ಕೆ ತಪ್ಪುಮಾಹಿತಿ ನೀಡಿ 1999 ರಿಂದ 2002 ರವರೆಗೂ 7.70 ಲಕ್ಷ ರೂ.ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿವಮೊಗ್ಗ ಮೂಲದ ಶಂಕರಮೂರ್ತಿ, ಉಡುಪಿಯಿಂದ ಓಡಾಟದ ಭತ್ತೆ ಪಡೆದಿರೋದು ತಪ್ಪು. ಹೀಗಾಗಿ, ಈ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಹನುಮೇಗೌಡರು ತಮ್ಮ ದೂರಿನಲ್ಲಿ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.