ಅಶ್ರಫ್ ಹತ್ಯೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ: ಹಂತಕರನ್ನು ಬಂಧಿಸಿ, ಕುಟುಂಬಕ್ಕೆ ಪರಿಹಾರ ನೀಡಿ
ಬೆಂಗಳೂರು, ಜೂ.24: ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸುವ ಜೊತೆಗೆ ಅಶ್ರಫ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ರಾಜ್ಯ ಸರಕಾರ ಮುಂದಾಗಬೇಕೆಂದು ಎಸ್‌ಡಿಪಿಐ ಒತ್ತಾಯಿಸಿದೆ.
ಶನಿವಾರ ನಗರದ ಬನಪ್ಪಪಾರ್ಕ್‌ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಂಗಳೂರು ಜಿಲ್ಲಾ ಘಟಕವು ದಕ್ಷಿಣ ಕ್ನನಡ ಜಿಲ್ಲೆಯ ಕಲಾಯಿ ಅಶ್ರಫ್ ಹತ್ಯೆಗೈದಿರುವುದನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮುಜಾಹಿದ್‌ಪಾಶ, ಆಟೊ ಚಾಲಕನಾಗಿದ್ದ ಅಶ್ರಫ್ ಕಲಾಯಿನನ್ನು ದುಷ್ಕರ್ಮಿಗಳು ಕೋಮು ದ್ವೇಷದಿಂದ ಕೊಲೆಗೈದಿರುತ್ತಾರೆ. ಅಶ್ರಫ್ ಎಸ್‌ಡಿಪಿಐ ಪಕ್ಷದ ಅಮ್ಮುಂಜೆ ಪ್ರದೇಶದ ವಲಯಾಧ್ಯಕ್ಷರಾಗಿದ್ದು, ಬೀಡಿ ಉದ್ಯಮಿ ಶೀನ ಪೂಜಾರಿ ಎಂಬವರನ್ನು ಆಟೊದಲ್ಲಿ ಎಂದಿನಂತೆ ಬಾಡಿಗೆಗೆ ಕರೆದುಕೊಂಡು ಹೋಗಿದ್ದ ವೇಳೆ ಬೆಂಜನಪದನ ಕರಾವಳಿ ಸೈಟ್ ಎಂಬಲ್ಲಿ ದುಷ್ಕರ್ಮಿಗಳು ಪೂರ್ವ ಯೋಜಿತವಾಗಿ ಕೋಮುದ್ವೇಷದಿಂದ ಕೊಲೆಗೈದಿದ್ದಾರೆ ಎಂದು ಆರೋಪಿಸಿದರು.
ದ.ಕ.ಜಿಲ್ಲೆಯಲ್ಲಿ ಕೋಮುದ್ವೇಷದ ವಾತಾವರಣ ಹಲವು ದಿನಗಳಿಂದಯಿದ್ದು, ಇದರ ಲಾಭವನ್ನು ಪಡೆಯಲು ಸಂಘಪರಿವಾರದ ವ್ಯಕ್ತಿಗಳು ಪೂರ್ವ ನಿಯೋಜಿತವಾಗಿ ಈ ಕೊಲೆಯನ್ನು ನಡೆಸಿರುವುದಾಗಿ ಸ್ಪಷ್ಟಗೊಂಡಿರುವುದರಿಂದ ಹಾಗೂ ಕೊಲೆಯ ವಿಚಾರವಾಗಿ ಪೊಲೀಸರು ಮುಂಜಾಗೃತ ಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದ ಸಂದರ್ಭ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದನ್ನು ನೋಡಿದರೆ ಇದು ಸಂಘಪರಿವಾರದ ಪೂರ್ವ ಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ ಫಯಾಝ್ ಅಹ್ಮದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಪ್ರಕ್ಷುಬ್ದ ವಾತಾವರಣವನ್ನು ಮತ್ತು ಸಂಘಪರಿವಾರದವರ ಅಟ್ಟಹಾಸವನ್ನು ನಿಯಂತ್ರಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವುದರಿಂದ ಈ ಕೊಲೆಯ ನೇರ ಹೊಣೆಯನ್ನು ಜಿಲ್ಲಾಡಳಿತವೆ ಹೊರಬೇಕೆಂದರು.
ಮನವಿ: ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಎಸ್‌ಡಿಪಿಐ ಬೆಂಗಳೂರು ಜಿಲ್ಲಾ ಮುಖಂಡರು ಜಿಲ್ಲಾಧಿಕಾರಿ ವಿ.ಶಂಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಎಚ್.ಎಂ.ಗಂಗಪ್ಪ, ಮುಝಮ್ಮಿಲ್ ಪಾಶ ಸೇರಿ ಪ್ರಮುಖರು ಹಾಜರಿದ್ದರು.