ಜೈಲು ಶಿಕ್ಷೆ ತಡೆ ಕೋರಿ ರವಿ ಬೆಳಗೆರೆಯಿಂದ ಹೈಕೋರ್ಟ್‌ಗೆ ರಿಟ್

Update: 2017-06-27 14:50 GMT

ಬೆಂಗಳೂರು, ಜೂ.27: ಶಾಸಕರ ವಿರುದ್ಧ ಲೇಖನ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿಯಿಂದ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಹಿರಿಯ ಪತ್ರಕರ್ತರಾದ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಅವರು ತಮ್ಮ ಶಿಕ್ಷೆಗೆ ತಡೆ ಕೋರಿ ಮಂಗಳವಾರ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದಾರೆ. ಜೈಲು ಶಿಕ್ಷೆ ನೀಡುವ ಅಧಿಕಾರ ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿಗೆ ಇಲ್ಲ. ತಮಗೆ ನೀಡಿರುವ ಜೈಲು ಶಿಕ್ಷೆ ಅಸಂವಿಧಾನಿಕ ಮತ್ತು ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಿಲ್ಲ. ಹೀಗಾಗಿ ಹಕ್ಕು ಬಾಧ್ಯತಾ ಸಮಿತಿ ನೀಡಿರುವ ಶಿಕ್ಷೆಗೆ ತಡೆ ನೀಡಬೇಕು ಎಂದು ಇಬ್ಬರು ಪತ್ರಕರ್ತರು ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ರವಿ ಬೆಳಗೆರೆ ಅವರು ಸದ್ಯ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಮ್ಮ ವಕೀಲರ ಮೂಲಕ ಇಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಶಾಸಕ ನಾಗರಾಜ್ ಹಾಗೂ ಕೆ.ಬಿ.ಕೋಳಿವಾಡ ವಿರುದ್ಧ ಅವಹೇಳನಕಾರಿಯಾಗಿ ಸುದ್ದಿ ಪ್ರಕಟಿಸಿದ ಆರೋಪದ ಮೇಲೆ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಹಾಗೂ ಯಲಹಂಕ ವಾಯ್ಸಿ ಪತ್ರಿಕೆ ಸಂಪಾದಕ ಅನಿಲ್ ರಾಜ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News