ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷದ ಗೆಲುವಿಗೆ ಶ್ರಮಿಸಿ; ಮುಖಂಡರಿಗೆ ವೇಣುಗೋಪಾಲ್ ಸೂಚನೆ
ಬೆಂಗಳೂರು, ಜೂ. 27: ಏನೇ ಭಿನ್ನಾಭಿಪ್ರಾಯಗಳಿದ್ದರೂ, ಅವುಗಳನ್ನು ಬದಿಗಿಟ್ಟು ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿಯೂ ಆಗಿರುವ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೂಚನೆ ನೀಡಿದ್ದಾರೆ.
ಮಂಗಳವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಬಳ್ಳಾರಿ, ಚಿಕ್ಕಬಳ್ಳಾಪುರ, ಹಾಸನ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ವೇಣುಗೋಪಾಲ್, ನಿಮ್ಮಲ್ಲಿ ಏನೇ ಭಿನ್ನವಿದ್ದರೂ ಅದನ್ನೆಲ್ಲ ಬದಿಗಿಟ್ಟು, ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಬಳ್ಳಾರಿಯ ಲಾಡ್ ಸಹೋದರರಿಗೆ ತಾಕೀತು ಮಾಡಿದರು.
ಸಚಿವ ಸಂತೋಷ್ ಲಾಡ್, ಶಾಸಕ ಅನಿಲ್ ಲಾಡ್, ಹಿರಿಯ ಮುಖಂಡ ಕೆ.ಸಿ.ಕೊಂಡಯ್ಯ ಸೇರಿದಂತೆ ಜಿಲ್ಲಾ ಮುಖಂಡರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಬಳ್ಳಾರಿ ಕಾಂಗ್ರೆಸ್ ಸಮನ್ವಯ ಸಮಿತಿ ರಚಿಸಲಾಗುವುದು ಎಂದು ವೇಣುಗೋಪಾಲ್ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಏನೇ ಭಿನ್ನಮತವಿದ್ದರೂ ಬಹಿರಂಗ ಹೇಳಿಕೆಗಳನ್ನು ನೀಡಬಾರದು. ಸಮನ್ವಯ ಸಮಿತಿ ಮುಂದೆ ಭಿನ್ನಾಭಿಪ್ರಾಯಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಸೂಚಿಸಿದರು.ಆ ಬಳಿಕ ಬಿಜಾಪುರ, ಚಿಕ್ಕಬಳ್ಳಾಪುರ, ಬಳ್ಳಾರಿ, ಹಾಸನ ಜಿಲ್ಲಾ ಮುಖಂಡರೊಂದಿಗೆ ಸಭೆ ನಡೆಸಲಾಯಿತು.
ಚುನಾವಣಾ ರಣತಂತ್ರ: 2018ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಗೆಲುವಿಗಾಗಿ ಮುಖಂಡರ ಮಧ್ಯೆ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ನಾಳೆ(ಜೂ.28) ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ, ಕಿಸಾನ್ ಸೇರಿದಂತೆ ವಿವಿಧ ಮೋರ್ಚಾ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.
ಜೂ.29ರಂದು ಬಾಗಲಕೋಟೆಯ ಕೂಡಲ ಸಂಗಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಅಧಿಕಾರ ಸ್ವೀಕಾರ ಮಾಡಲಿದ್ದು, ಬೃಹತ್ ಸಮಾವೇಶ ಏರ್ಪಡಿಸಿದ್ದು, ಉಸ್ತುವಾರಿ ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.