ರೌಡಿಶೀಟರ್ ಪಳನಿ ಹತ್ಯೆ ಪ್ರಕರಣ: ಆರೋಪಿ ನ್ಯಾಯಾಲಯಕ್ಕೆ ಶರಣು

Update: 2017-06-28 12:21 GMT

ಬೆಂಗಳೂರು, ಜೂ.28: ರೌಡಿಶೀಟರ್ ಪಳನಿ ಹತ್ಯೆ ಪ್ರಕರಣ ಸಂಬಂಧ ಆರೋಪಿ ನ್ಯಾಯಾಲಯದ ಎದುರು ಶರಣಾಗಿದ್ದಾನೆ. ಇಂದಿರಾನಗರದ ರೌಡಿಶೀಟರ್ ಮಲ್ಲೇಶ್ ಎಂಬಾತ ಬೆಂಗಳೂರಿನ 11ನೆ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರೆದುರು ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರೌಡಿಶೀಟರ್ ಪಳನಿ ಹತ್ಯೆ ಪ್ರಕರಣ ಸಂಬಂಧ ಮಲ್ಲೇಶ್‌ಗಾಗಿ ಪೊಲೀಸರ ತಂಡ ತೀವ್ರ ಹುಡುಕಾಟ ನಡೆಸಿತ್ತು. ಪೊಲೀಸರು ತನ್ನನ್ನು ಎನ್‌ಕೌಂಟರ್ ಮಾಡಿ ಸಾಯಿಸಬಹುದು ಎಂಬ ಭಯದಿಂದ ಆರೋಪಿಯು ನೇರವಾಗಿ ನ್ಯಾಯಾಧೀಶರೆದುರು ಶರಣಾಗಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಪಳನಿಯನ್ನು ಮಲ್ಲೇಶ್ ಈ ಕೊಲೆ ಮಾಡಿಸಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಬಂಧ ನಗರದ ಕೆಜಿ ಹಳ್ಳಿ ಠಾಣೆ ಪೊಲೀಸರು ಆರೋಪಿ ಮಲ್ಲೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಲ್ಲಿ ಮಲ್ಲೇಶ್ ನೇರವಾಗಿ ಭಾಗಿಯಾಗದೇ ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಈತನ ಸಹಚರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಮಲ್ಲೇಶ್ ಮಹದೇವಪುರದಲ್ಲಿ ಪಳನಿಯ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದ. ಆದರೆ, ಆ ವೇಳೆ ಪಳನಿ ಈತನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.

 ಜೂ.23 ರಂದು ಬೆಳಗ್ಗೆ ಕೆಜಿ ನಗರದ ಪಳನಿಯ ಮನೆ ಮುಂದೆಯೇ ಆತನನ್ನು ಕೊಲೆ ಮಾಡಲಾಗಿತ್ತು. ಇಂದಿರಾನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಮಲ್ಲೇಶ್ ಹೆಸರಿದ್ದು, ಈತನ ವಿರುದ್ಧ 10ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News