ಜೂ.30: ಆಧಾರ್ ಕಾರ್ಡ್ ಯುಐಡಿ ಕಿರುಕುಳ ಖಂಡಿಸಿ ಪ್ರತಿಭಟನೆ

Update: 2017-06-28 13:10 GMT

ಬೆಂಗಳೂರು, ಜೂ.28: ಆಧಾರ್ ಕಾರ್ಡಿನ ಯುಐಡಿ ಕಿರುಕುಳ ಖಂಡಿಸಿ ಹಾಗೂ ಏಜೆನ್ಸಿಗಳ ನಿಯಮಗಳನ್ನು ವಿರೋಧಿಸಿ ಜೂ.30ರಂದು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಆಧಾರ್ ಆಪರೇಟರ್ಸ್‌ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಯುಐಡಿ ಅವರು ದಿನಕ್ಕೊಂದು ಕಾನೂನು ತರುವ ಮೂಲಕ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಕಷ್ಟ ಪಟ್ಟು ಸಾಲ ಮಾಡಿ 1500ಕ್ಕೂ ಹೆಚ್ಚು ಜನ ಬಂಡವಾಳ ಹಾಕಿ ಆಧಾರ್ ಕಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ಈಗ ಏಕಾಏಕಿ ಪ್ರತಿ ಆಧಾರ್ ಆಪರೇಟರ್ಸ್‌ 1 ಲಕ್ಷ ಹಣ ಡೆಪಾಸಿಟ್ ನೀಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಅಲ್ಲದೇ ಕೆಲ ತಾಂತ್ರಿಕ ಸಮಸ್ಯೆಗಳು ಸಹ ಉದ್ಭವವಾಗುತ್ತಿದ್ದು, ಇದರಿಂದ ಕೆಲ ವ್ಯಕ್ತಿಗಳ ಐಡಿಗಳನ್ನು ಬ್ಲಾಕ್ ಲಿಸ್ಟ್‌ಗೆ ಹಾಕುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಯೋಗ ಸಾಯಿ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಅಲ್ಲದೆ, ಸಲ್ಲದ ಆರೋಪ ಮಾಡಿ 6 ತಿಂಗಳಿಂದ ಕೋಡ್ ಹಣದಲ್ಲಿ ಕಟ್ ಮಾಡುತ್ತಿದ್ದು, ಸಂಬಳ ನೀಡುತ್ತಿಲ್ಲ ಎಂದ ಅವರು, ನಮ್ಮ ಕಾರ್ಯದಿಂದ 2014ರ ನಂತರ ಶೇ. 96ರಷ್ಟು ಆಧಾರ್ ಕಾರ್ಡ್‌ಗಳನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಆದರೆ ಈಗ ಇಂತಹ ನಿಯಮ, ಆರೋಪಗಳಿಂದ ನಮ್ಮ ಕೆಲಸವನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ ಯುಐಡಿಯ ನಿಯಮ ವಿರೋಧಿಸಿ ದಾವಣಗೆರೆ, ಕೋಲಾರ, ತುಮಕೂರು, ಬೀದರ್ ಮುಂತಾದ ಜಿಲ್ಲೆಗಳಿಂದ ಒಟ್ಟುಗೂಡಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News