ಮುಂದಿನ ಚುನಾವಣೆ ನಮ್ಮ ಪಾಲಿಗೆ ಪ್ರತಿಷ್ಠೆ: ಕೆ.ಸಿ.ವೇಣುಗೋಪಾಲ್

Update: 2017-06-28 14:58 GMT

ಬೆಂಗಳೂರು, ಜೂ.28: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಸಂಕಲ್ಪದೊಂದಿಗೆ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದು, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಸಂಘಟಿತ ಹೋರಾಟ ಹಾಗೂ ಪ್ರಯತ್ನ ನಡೆಸಲಾಗುವುದು ಎಂದರು.
ವಿವಿಧ ಜಿಲ್ಲೆಗಳಲ್ಲಿ ಪಕ್ಷದ ಮುಖಂಡರ ವಿರುದ್ಧ ಇರುವ ಅಸಮಾಧಾನ, ಅತೃಪ್ತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧ್ಯಕ್ಷರು ಸೇರಿದಂತೆ ಪ್ರಮುಖರೊಂದಿಗೆ ನಡೆಸಿದ ಸಭೆಗಳು ನಿನ್ನೆಗೆ ಅಂತ್ಯಗೊಂಡಿವೆ. ಪಕ್ಷ ಸಂಘಟನೆ ಹಾಗೂ ಆಯಾ ಜಿಲ್ಲೆಗಳಲ್ಲಿ ಪಕ್ಷದ ಹೆಚ್ಚಿನ ಶಾಸಕರು ಗೆಲ್ಲುವ ವಾತಾವರಣ ನಿರ್ಮಾಣ ಮಾಡುವ ಕುರಿತು ಹಲವಾರು ಸಲಹೆ, ಸೂಚನೆಗಳನ್ನು ನೀಡಲಾಗಿದೆ ಎಂದು ವೇಣುಗೋಪಾಲ್ ಹೇಳಿದರು.

ಇಂದು ಪಕ್ಷದ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಸಭೆ ನಡೆಸಿ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವಂತೆ ಸೂಚಿಸಲಾಗುವುದು. ಪರಿಶಿಷ್ಟ ಜಾತಿ, ಪಂಗಡ, ಕಿಸಾನ್ ಘಟಕ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಘಟಕ, ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್, ಮಹಿಳಾ ಘಟಕ ಸೇರಿದಂತೆ 14ಕ್ಕೂ ಹೆಚ್ಚು ವಿವಿಧ ಮುಂಚೂಣಿ ಘಟಕಗಳ ಪದಾಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಮುಂಬರುವ ಚುನಾವಣೆಯಲ್ಲಿ ಈ ಮುಂಚೂಣಿ ಘಟಕಗಳ ಕಾರ್ಯನಿರ್ವಹಣೆ ಹೇಗಿರಬೇಕು ಹಾಗೂ ಯಾವ ರೀತಿಯಲ್ಲಿ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಘಟಕಗಳ ಪ್ರಮುಖರಿಗೆ ಸೂಚನೆಗಳನ್ನು ನೀಡಲಾಗುವುದು ಎಂದು ವೇಣುಗೋಪಾಲ್ ಹೇಳಿದರು.
ರಾಜ್ಯದಲ್ಲಿ ಇಬ್ಬರು ಪತ್ರಕರ್ತರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿರುವ ಸ್ಪೀಕರ್ ಕೆ.ಬಿ.ಕೋಳಿವಾಡ ಕ್ರಮದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷ ಪತ್ರಿಕಾ ಸ್ವಾತಂತ್ರದ ಪರವಾಗಿದೆ. ಪತ್ರಕರ್ತರಿಗೆ ವಿಧಿಸಿರುವ ಶಿಕ್ಷೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಯುವ ಕಾಂಗ್ರೆಸ್ ನಾಯಕರಿಗೆ ತರಾಟೆ: 
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮಗಳು ನಡೆದಿದ್ದು, ಅಧ್ಯಕ್ಷ ಬಸವನಗೌಡ ಬಾದರ್ಲಿ ನೇಮಕವನ್ನು ಅಸಿಂಧುಗೊಳಿಸಿ, ತಕ್ಷಣವೇ ಹೊಸದಾಗಿ ಚುನಾವಣೆ ನಡೆಸುವಂತೆ ಒತ್ತಾಯಿಸಿದ ಕೆಲ ಯುವ ಕಾಂಗ್ರೆಸ್ ನಾಯಕರನ್ನು ವೇಣುಗೋಪಾಲ್ ತರಾಟೆಗೆ ತೆಗೆದುಕೊಂಡರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಹುಡುಗಾಟ ಆಡಬೇಡಿ. ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಮುಂದಿನ ಒಂದು ವರ್ಷದಲ್ಲಿ ಎಷ್ಟು ಪ್ರತಿಭಟನೆಗಳನ್ನು ಮಾಡುತ್ತೀರಾ. ವಲಯವಾರು ಯಾವ ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸುತ್ತೀರಾ ಎಂಬುದರ ಕುರಿತು ವಿವರ ಕೊಡಿ ಎಂದು ವೇಣುಗೋಪಾಲ್ ಕೇಳಿದರು.

ಆದರೆ, ಇದ್ಯಾವುದರ ಬಗ್ಗೆಯೂ ಚಕಾರವೆತ್ತದ ಯುವ ಕಾಂಗ್ರೆಸ್ ಮುಖಂಡರು, ಚುನಾವಣಾ ಅಕ್ರಮದ ಕುರಿತು ವಿಷಯ ಪ್ರಸ್ತಾಪ ಮಾಡಿದರು. ಇದರಿಂದ, ಆಕ್ರೋಶಗೊಂಡ ವೇಣುಗೋಪಾಲ್, ಇದು ಚುನಾವಣೆಯ ವರ್ಷ. ಈ ಹಂತದಲ್ಲಿ ಪಕ್ಷದ ಸಂಘಟನೆ ಹಾಗೂ ಯುವಕರನ್ನು ಪಕ್ಷದ ಕಡೆ ಸೆಳೆಯುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಬದಲು, ಅನಗತ್ಯವಾದ ವಿಷಯಗಳನ್ನು ಮುಂದಿಟ್ಟುಕೊಂಡು ಕಾಲಹರಣ ಮಾಡುತ್ತೀದ್ದಿರಾ ಎಂದು ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News