ರಸ್ತೆಯಲ್ಲಿ ವಾಹನ ನಿಲ್ಲಿಸಿ ದರೋಡೆ ಪ್ರಕರಣ: ರೌಡಿಗಳಿಬ್ಬರು ಸೇರಿ ಹತ್ತು ಜನರ ಬಂಧನ

Update: 2017-06-30 12:49 GMT

ಬೆಂಗಳೂರು, ಜೂ.30: ರಸ್ತೆಯಲ್ಲಿ ಸಾಗುತ್ತಿರುವ ವಾಹನಗಳನ್ನು ನಿಲ್ಲಿಸಿ ದರೋಡೆ ಮಾಡುತ್ತಿದ್ದ ಪ್ರಕರಣ ಸಂಬಂಧ ರೌಡಿಗಳಿಬ್ಬರು ಸೇರಿ ಹತ್ತು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರವಿಕುಮಾರ್, ವಿನಯ್‌ಪ್ರಸಾದ್ ರೌಡಿಗಳಾಗಿದ್ದು, ಹರೀಶ್‌ಕುಮಾರ್, ಸಂದೀಪ್, ಭರತ್, ಮಂಜುನಾಥ, ಭೀಮ್‌ರಾಯ್, ನವೀನ್, ಚೇತನ್, ಯೋಗೇಶ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ನಗರದ ಪೀಣ್ಯ ಕೈಗಾರಿಕ ಪ್ರದೇಶದ ರಸ್ತೆಯಲ್ಲಿ ಬರುವ ಹಣವಂತರನ್ನು ಗುರುತಿಸಿ, ಅವರ ಮೇಲೆ ಹಲ್ಲೆ ನಡೆಸಿ ನಗದು, ಚಿನ್ನಾಭರಣ ದೋಚಲು ಸಜ್ಜಾಗಿ ಕಾಯುತ್ತಿದ್ದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿಪಟ್ಟಿಯಲ್ಲಿರುವ ರವಿಕುಮಾರ್ ಹಾಗೂ ಹರೀಶ್‌ಕುಮಾರ್, ಸಂದೀಪ್, ಭರತ್, ಮಂಜುನಾಥನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳಿಂದ ಕಬ್ಬಿಣದ ಲಾಂಗ್, ಚಾಕು, ಮರದ ದೊಣ್ಣೆ ಮತ್ತು ಕಾರು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣದ ಪ್ರಮುಖ ಆರೋಪಿ ರೌಡಿ ರವಿಕುಮಾರ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 4 ಕೊಲೆಯತ್ನ ಮತ್ತು ಎರಡು ದರೋಡೆ ಪ್ರಯತ್ನದಂತಹ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ಅದೇ ರೀತಿ, ಹರೀಶ್‌ಕುಮಾರ್ ಸಹ ರೌಡಿಪಟ್ಟಿಯಲ್ಲಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೌಡಿ ವಿನಯ್: ನಗರದ ಸುಮ್ಮನಹಳ್ಳಿ ಬರಿಯಾ ಗ್ರೌಂಡ್ ಕಾಂಪೌಂಡ್ ಪಕ್ಕದ ರಸ್ತೆಯಲ್ಲಿ ಬರುವವರನ್ನು ಗುರುತಿಸಿ ಅವರನ್ನು ಕೊಲೆ ಮಾಡಿ ಅವರ ಬಳಿಯಿರುವ ನಗದು, ಚಿನ್ನದ ಆಭರಣಗಳನ್ನು ದೋಚಲು ಸಜ್ಜಾಗಿ ಕಾಯುತ್ತಿದ್ದ ಆರೋಪದ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ರೌಡಿ ವಿನಯ್‌ಪ್ರಸಾದ್ ಹಾಗೂಭೀಮ್‌ರಾಯ್, ನವೀನ್, ಚೇತನ್, ಯೋಗೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣದ ಪ್ರಮುಖರ ಆರೋಪಿ ವಿನಯ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಇನ್ನೂ ಆರೋಪಿಗಳಾದ ಭೀಮರಾಜ್, ನವೀನ್ ಕುಮಾರ್ ಸಹ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿಯಲ್ಲಿದ್ದು, ತಲಾ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಸಿಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News