ಜಿಎಸ್‌ಟಿ ವಿರೋಧಿಸಿ ಎಸ್‌ಯುಸಿಐ ಪ್ರತಿಭಟನೆ

Update: 2017-06-30 13:04 GMT

ಬೆಂಗಳೂರು, ಜೂ. 30: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ಜಾರಿ ವಿರೋಧಿಸಿ ಎಸ್‌ಯುಸಿಐ(ಸಿ) ಸದಸ್ಯರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್‌ಯುಸಿಐ(ಸಿ) ಪ್ರಧಾನ ಸಂಚಾಲಕ ವಿ.ಎನ್.ರಾಜಶೇಖರ್ ಮಾತನಾಡಿ, ಜು.1 ರಿಂದ ಜಾರಿಯಾಗುತ್ತಿರುವ ಜಿಎಸ್‌ಟಿ ಮಸೂದೆ ಕಾನೂನು ಬದ್ಧವಾಗಿಲ್ಲ. ಅನಗತ್ಯ ತೆರಿಗೆಗಳನ್ನು ಜಿಎಸ್‌ಟಿಯಲ್ಲಿ ಸೇರಿಸಲಾಗಿದೆ. ಕೇಂದ್ರ ಸರಕಾರ ಜಿಎಸ್‌ಟಿ ಮಸೂದೆ ಬಗ್ಗೆ ಇದುವರೆಗೂ ಸಾಮಾನ್ಯ ವರ್ಗಕ್ಕೆ ಮಾಹಿತಿ ನೀಡದಿರುವುದರಿಂದ ಜನರಲ್ಲಿ ಗೊಂದಲ ಸೃಷ್ಟಿಸಿದೆ ಎಂದರು.

ದೇಶದ ಪ್ರಮುಖ ಸುಧಾರಣಾ ತೆರಿಗೆ ವಿಧಾನವೆಂದು ಹೇಳಲಾಗುತ್ತಿರುವ ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ಕೇಂದ್ರ ಸರಕಾರಕ್ಕೆ ವರವಾದರೆ ರಾಜ್ಯ ಸರಕಾರಗಳಿಗೆ ಶಾಪವಾಗಲಿದೆ. ಅಲ್ಲದೆ ರಾಜ್ಯದ ಆದಾಯಕ್ಕೆ ಕೊಕ್ಕೆ ಬೀಳಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ವಾಣಿಜ್ಯ ತೆರಿಗೆಯ ವ್ಯಾಪ್ತಿಯನ್ನು ದಿನೇ ದಿನೇ ಕಳೆದುಕೊಳ್ಳುತ್ತಿದೆ. ಈ ಪರಿಸ್ಥಿತಿ ಈಗೇ ಮುಂದುವರೆದರೆ ರಾಜ್ಯ ದಿವಾಳಿಯಾಗಲಿದೆ. ಉದ್ಯೋಗ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ರಾಜ್ಯದ ಜನರು ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಜಿಎಸ್‌ಟಿ ಜಾರಿಯಾದರೆ ಕೇಂದ್ರದ ಕೈಯಲ್ಲಿ ಆರ್ಥಿಕ ಕೇಂದ್ರೀಕರಣವಾಗಲಿದೆ. ಇದು ದೇಶದಾದ್ಯಂತ ಫ್ಯಾಶಿಸ್ಟ್ ವಾದಕ್ಕೆ ನಾಂದಿ ಹಾಡುತ್ತದೆ. ಜಿಎಸ್‌ಟಿಯಿಂದ ವಸ್ತುಗಳ ಬೆಲೆ ಇಳಿಯುವುದರ ಬಗ್ಗೆ ಯಾರಿಗೂ ಖಚಿತತೆ ಇಲ್ಲ. ಬದಲಿಗೆ, ಇದರಿಂದ ಪರೋಕ್ಷ ತೆರಿಗೆಯ ಪ್ರಮಾಣ ಹೆಚ್ಚಾಗುವುದರಿಂದ ಗ್ರಾಹಕರಿಗೆ ಹೊರೆಯಾಗಲಿದೆ ಎಂದು ಹೇಳಿದರು.

ಸರಕಾರಕ್ಕೆ ಜನಸಾಮಾನ್ಯರ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಹಾಗು ಇನ್ನಿತರ ಅದೇ ರೀತಿಯ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತರಲಿ. ಕಾಪೋರೇಟ್ ವಲಯದ ಅನುಕೂಲಕ್ಕಾಗಿ ಚಿಕ್ಕ ವ್ಯಾಪಾರಸ್ಥರನ್ನು ಧ್ವಂಸ ಮಾಡುವಲ್ಲಿ ಇದು ಮೊದಲನೆಯ ಹೆಜ್ಜೆಯಾಗಲಿದೆ ಎಂದು ಭೀತಿ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಸ್‌ಯುಸಿಐನಲ್ಲಿ ಸದಸ್ಯರಾದ ರವಿನಂದನ್, ಎಂ.ಎನ್.ಶ್ರೀರಾಮ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News