ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಆಕ್ರೋಶ

Update: 2017-07-04 16:01 GMT

ಬೆಂಗಳೂರು, ಜು.4: ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರದಿದ್ದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೈಲಿನಲ್ಲಿ ಇರುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಅಮಿತ್ ಶಾ ಮೇಲಿದ್ದ ಆರೋಪಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸುದೀರ್ಘ ವಿಚಾರಣೆ ನಂತರ ಅವರನ್ನು ಈ ಹಿಂದೆಯೇ ದೋಷಮುಕ್ತಗೊಳಿಸಲಾಗಿದೆ. ಹೀಗಿದ್ದರೂ ಮುಖ್ಯಮಂತ್ರಿ, ಶಾ ಕುರಿತು ಆಡಿರುವ ಮಾತುಗಳು ನ್ಯಾಯಾಂಗ ಘನತೆಗೆ ಚ್ಯುತಿ ಉಂಟು ಮಾಡುವಂತಹದಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುಪಿಎ ಆಡಳಿತಾವಧಿಯಲ್ಲಿ ನಡೆದಿದ್ದ ಸೋಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಉದ್ದೇಶ ಪೂರ್ವಕವಾಗಿ ಆರೋಪಿಯನ್ನಾಗಿಸಿದ್ದು ರಾಜಕೀಯ ಸೇಡಿನ ಕ್ರಮವಾಗಿತ್ತು. ಕಾಂಗ್ರೆಸ್ ಸರಕಾರದ ಸರಕಾರ ಇದ್ದಿದ್ದರೆ ಅಧಿಕಾರ ದುರುಪಯೋಗದಿಂದ ಶಾ ಅವರನ್ನು ಅಪರಾಧಿಯನ್ನಾಗಿ ಮಾಡಲಾಗುತ್ತಿತ್ತು ಎನ್ನುವುದು ಮುಖ್ಯಮಂತ್ರಿ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ ಎಂದು ರವಿಕುಮಾರ್ ದೂರಿದ್ದಾರೆ.

ಕಾಂಗ್ರೆಸ್ ಪಕ್ಷವು ವಾಸ್ತವ ಸಂಗತಿಗೆ ವಿಮುಖವಾಗಿ ವಾದದಲ್ಲಿ ಗೆಲ್ಲುವ ಏಕೈಕ ಉದ್ದೇಶದಿಂದ ಯಾವ ಮಟ್ಟಕ್ಕಾದರೂ ಇಳಿಯಬಲ್ಲದು ಎನ್ನುವ ಸಂಗತಿ ರಾಜ್ಯದ ಸಮಸ್ತ ಜನರನ್ನು ದಿಗ್ಭ್ರಾಂತರನ್ನಾಗಿಸಿದೆ. ಅಲ್ಲದೇ, ಮುಖ್ಯಮಂತ್ರಿಯ ಹೇಳಿಕೆ ಕಾಂಗ್ರೆಸ್ಸಿನ ದುಷ್ಟ ಮಾನಸಿಕತೆಯ ಪ್ರತೀಕವಾಗಿದೆ. ತಮ್ಮ ಹೇಳಿಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಷರತ್ ಕ್ಷಮೆ ಯಾಚಿಸಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News