ಬಿಎಸ್‌ವೈ ವಿರುದ್ಧ ಸಚಿವ ಎಂ.ಬಿ.ಪಾಟೀಲ್ ಕೆಂಡ
ಬೆಂಗಳೂರು, ಜು. 6: ಲಿಂಗಾಯತ ಸಮುದಾಯದಲ್ಲಿ ತಾನೊಬ್ಬ ಪ್ರಭಾವಿ ನಾಯಕನಾಗಿ ಬೆಳೆಯುತ್ತಿರುವುದರಿಂದ ಮಾಜಿ ಸಿಎಂ ಯಡಿಯೂರಪ್ಪ ತನ್ನ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಆಕ್ಷೇಪಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ತನ್ನ ವಿರುದ್ಧ ಬಿಎಸ್‌ವೈ ಏಕವಚನ ಪ್ರಯೋಗಿಸಿದ ಹಿನ್ನೆಲೆಯಲ್ಲಿ ಅವರ ಮೇಲೆ ತಾನು ಇಟ್ಟಿದ್ದ ಗೌರವವನ್ನು ಕಳೆದುಕೊಂಡಿದ್ದೇನೆ. ಆದರೆ, ಅವರ ಹಿರಿತನಕ್ಕೆ ಗೌರವ ನೀಡುವುದು ನಮ್ಮ ಸಂಸ್ಕೃತಿ ಎಂದು ಹೇಳಿದರು.
ವಿಪಕ್ಷದಲ್ಲಿರುವವರು ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುವುದು ಸಹಜ. ಆದರೆ, ಆಧಾರರಹಿತ ಸುಳ್ಳು ಆರೋಪ ಸರಿಯಲ್ಲ. ರಾಜ್ಯ ಸರಕಾರ ಯಾವುದೇ ಅಕ್ರಮದಲ್ಲಿ ಪಾಲ್ಗೊಂಡಿಲ್ಲ. ಸಚಿವ ಸಂಪುಟದ ಯಾವೊಬ್ಬ ಸದಸ್ಯನೂ ಜೈಲಿಗೆ ಹೋಗಿ ಬಂದಿಲ್ಲ ಎಂದು ಪಾಟೀಲ್ ತಿರುಗೇಟು ನೀಡಿದರು.
ಸಿಟ್ಟಿಗೆ ನಾಲ್ಕು ಕಾರಣ: ಬಿಎಸ್‌ವೈ ತನ್ನ ಮೇಲೆ ಸಿಟ್ಟಾಗಲು ನಾಲ್ಕು ಕಾರಣ. ಗುಂಡ್ಲುಪೇಟೆ ಉಪ ಚುನಾವಣೆಯನ್ನು ಬಿಎಸ್‌ವೈ ಪ್ರತಿಷ್ಠೆಯಾಗಿ ಸ್ಪೀಕರಿಸಿ, ಅಲ್ಲಿಯೆ ಮೊಕ್ಕಾಂ ಹೂಡಿ ತಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದರು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಗೆಲುವು ಸಾಧಿಸಿದ್ದಾರೆ. ಇವರ ಗೆಲುವಿನಲ್ಲಿ ನನ್ನ ಪಾತ್ರವಿತ್ತು.
ಅಲ್ಲದೆ, ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಲು ಆದೇಶ ಹೊರಡಿಸಿದ್ದು, ವಿಜಯಪುರ ಮಹಿಳಾ ವಿಶ್ವ ವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ನಾಮಕರಣ ಹಾಗೂ ಬಿಎಸ್‌ವೈ ವಿಜಯಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ಎಸ್.ಆರ್.ಪಾಟೀಲ್ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ 2ಲಕ್ಷ ಮಂದಿಯನ್ನು ಸೇರಿಸಿದ್ದರಿಂದ ಯಡಿಯೂರಪ್ಪ ತನ್ನ ವಿರುದ್ಧ ಸಿಟ್ಟಾಗಿದ್ದಾರೆ ಎಂದು ಹೇಳಿದರು.
ಮಿಷನ್-150: ತಮ್ಮ ಜೇಬಿನಲ್ಲಿ ಮತದಾರರನ್ನು ಇಟ್ಟುಕೊಂಡಿರುವವರಂತೆ ಯಡಿಯೂರಪ್ಪ ‘ಮಿಷನ್-150’ ಎಂದು ಅಹಂಕಾರದ ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ನಾವು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಮತ ನೀಡಿ ಎಂದು ಜನರಲ್ಲಿ ಮನವಿ ಮಾಡುತ್ತೇವೆ ಎಂದು ನುಡಿದರು.
ಮಲಪ್ರಭಾ ಕಾಲುವೆ ಆಧುನಿಕರಣ ಕಾಮಗಾರಿಗೆ ಇನ್ನೂ ಟೆಂಡರ್ ಆಗಿಲ್ಲ. ಹೀಗಿರುವ ವೇಳೆ ಅಕ್ರಮ ನಡೆದಿದೆ ಎಂದು ಬಿಎಸ್‌ವೈ ಆರೋಪ ಮಾಡಿದ್ದಾರೆ. ಅಲ್ಲದೆ, ಜಿಂದಾಲ್ ಸೇರಿದಂತೆ ಆ ಭಾಗದ 35 ಹಳ್ಳಿಗಳ ಜನರಿಗೆ 0.1ಟಿಎಂಸಿ ನೀರು ನೀಡಿದರೆ, 7 ಟಿಎಂಸಿ ನೀರು ಜಿಂದಾಲ್‌ಗೆ ನೀಡಿದ್ದಾರೆಂದು ಸುಳ್ಳು ಆರೋಪ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.