ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹ ಅಂಶಗಳ ಅಳವಡಿಕೆ: ಕಾಂತರಾಜು
ಬೆಂಗಳೂರು, ಜು.6: ಕೇಂದ್ರ ಸರಕಾರ ಸಂವಿಧಾನದ 123ನೆ ತಿದ್ದುಪಡಿಯಡಿ ರಾಷ್ಟ್ರೀಯ ಹಿಂದುಳಿದ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ದೊರಕಿಸಿಕೊಡುವ ನೆಪದಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹ ಅನೇಕ ಅಂಶಗಳನ್ನು ಸೇರಿಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಆತಂಕ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ದೇವರಾಜ ಅರಸು ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ಕೊಡುತ್ತಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಅದೇ ನೆಪದಲ್ಲಿ ರಾಜ್ಯ ಹಿಂದುಳಿದ ಆಯೋಗಗಳಿಗಿರುವ ಸ್ವಾಯತ್ತತೆಯನ್ನು ನಾಶ ಮಾಡುವಂತಹ ಹುನ್ನಾರವನ್ನು ವಿರೋಧಿಸುತ್ತಿದ್ದೇವೆ ಎಂದು ತಿಳಿಸಿದರು.
ಮಂಡಲ್ ಆಯೋಗದ ಶಿಫಾರಸಿನ ಮೇಲೆ 1993ರಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲಾಯಿತು. ಈ ಆಯೋಗ ಜಾರಿಯಾದ ನಂತರ ಅಳಿವಿನಂಚಿನಲ್ಲಿದ್ದ ಅನೇಕ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸಿಗುವಂತಾಯಿತು. ಹೀಗಾಗಿ ಈ ಆಯೋಗಕ್ಕೆ ಇನ್ನಷ್ಟು ಶಕ್ತಿಯನ್ನು ತಂದುಕೊಡುವ ನಿಟ್ಟಿನಲ್ಲಿ ಸಾಂವಿಧಾನಿಕ ಸ್ಥಾನಮಾನವನ್ನು ನೀಡುವಂತೆ ಒತ್ತಾಯಿಸಲಾಗಿತ್ತು. ಆದರೆ, ಕೇಂದ್ರ ಸರಕಾರ ಸಾಂವಿಧಾನಿಕ ಸ್ಥಾನಮಾನವನ್ನು ನೀಡುವ ನೆಪದಲ್ಲಿ ಆಯೋಗಕ್ಕಿರುವ ಹಲವು ಹಕ್ಕುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಈಗ ಜಾರಿತರಲು ಉದ್ದೇಶಿಸಿರುವ 123ನೆ ತಿದ್ದುಪಡಿ ಮಸೂದೆಯಲ್ಲಿ ಕೇಂದ್ರ ಸರಕಾರ ಇಡೀ ರಾಷ್ಟ್ರಕ್ಕೆ ಅನ್ವಯವಾಗುವಂತೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ತಯಾರಿಸಿದೆ. ಅದರೆ, ಪ್ರತಿ ಜಾತಿಯ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಒಂದೊಂದು ರಾಜ್ಯಕ್ಕೆ ಒಂದೊಂದು ರೀತಿಯಲ್ಲಿರುತ್ತದೆ. ಹೀಗಾಗಿ ಪ್ರತಿ ರಾಜ್ಯದಲ್ಲಿರುವ ಪ್ರತಿ ಜಾತಿಯನ್ನು ಪ್ರತ್ಯೇಕವಾಗಿ ವಿಶ್ಲೇಷಿಸಿ ಸೌಲಭ್ಯಗಳನ್ನು ನೀಡುವುದೇ ಸೂಕ್ತವಾಗಿದೆ. ಆದರೆ, ಕೇಂದ್ರ ಸರಕಾರ ರಾಷ್ಟ್ರೀಯ ಆಯೋಗದ ಮೂಲಕ ಜಾರಿ ಮಾಡಲು ಉದ್ದೇಶಿಸಿರುವ ಏಕ ರೀತಿಯ ಪಟ್ಟಿಯಿಂದ ಅನಾನುಕೂಲಗಳೇ ಹೆಚ್ಚಿವೆ ಎಂದು ಅವರು ಅಭಿಪ್ರಾಯಿಸಿದರು.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದುಳಿದ ಆಯೋಗಗಳ ಮುಖಾಂತರ ಹಿಂದುಳಿದ, ಅತಿ ಹಿಂದುಳಿದ ಹಾಗೂ ಅಳಿವಿನಂಚಿನಲ್ಲಿರುವ ಸಮುದಾಯವೆಂದು ವರ್ಗೀಕರಿಸಿ ಪ್ರತ್ಯೇಕವಾಗಿಯೇ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ, ಈ ಸೌಲಭ್ಯ ರಾಷ್ಟ್ರೀಯ ಹಿಂದುಳಿದ ಆಯೋಗದಲ್ಲಿ ಇಲ್ಲವಾಗಿದೆ. ಹೀಗಾಗಿ ಕೇಂದ್ರ ಸರಕಾರ ಜಾರಿ ಮಾಡಲು ಉದ್ದೇಶಿಸಿರುವ 123ನೆ ತಿದ್ದುಪಡಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕೆಂದು ಅವರು ಒತ್ತಾಯಿಸಿದರು.