ಪ್ರಾದೇಶಿಕ ಕಚೇರಿ ಬದಲಿಗೆ ಆಯುಕ್ತಾಲಯಕ್ಕೆ ಚಿಂತನೆ: ಸಿದ್ದರಾಮಯ್ಯ

Update: 2017-07-06 15:01 GMT

ಬೆಂಗಳೂರು, ಜು.6: ರಾಜ್ಯದ ಕಂದಾಯ ಇಲಾಖೆಯಲ್ಲಿರುವ ಪ್ರಾದೇಶಿಕ ಕಚೇರಿಗಳ ಬದಲಿಗೆ ಆಯುಕ್ತಾಲಯ ಸ್ಥಾಪನೆಗೆ ಚಿಂತನೆ ನಡೆಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದ್ದಾರೆ.

ಗುರುವಾರ ನಗರದ ಅರಮನೆ ಮೈದಾನದಲ್ಲಿ ಕಂದಾಯ ಇಲಾಖೆ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕಂದಾಯ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಕಂದಾಯ ನೌಕರರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ನಾಲ್ಕು ಪ್ರಾದೇಶಿಕ ಕಚೇರಿ ಬದಲಿಗೆ ಆಯುಕ್ತಾಲಯ ಸ್ಥಾಪನೆಗೆ ಚಿಂತನೆ ನಡೆಸಲಾಗುವುದು. ಅಲ್ಲದೆ, 1998ರಲ್ಲಿ ಪ್ರಾದೇಶಿಕ ಕಚೇರಿಗಳ ಬದಲಿಗೆ ಆಯುಕ್ತಾಲಯ ಸ್ಥಾಪಿಸುವಂತೆ ಶಿಫಾರಸ್ಸು ಮಾಡಿದ್ದೆ. ಆದರೆ ಅದು ಸಾಧ್ಯವಾಗಿಲ್ಲ. ಮತ್ತೊಮ್ಮೆ ಈ ಬೇಡಿಕೆ ಕೇಳಿಬಂದಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದೆಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
 
ಕಂದಾಯ, ಪೊಲೀಸ್ ಹಾಗೂ ಗ್ರಾಮ ಪಂಚಾಯತ್ ಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ ರಾಜ್ಯದ ಬಹುತೇಕ ಸಮಸ್ಯೆಗಳು ನಿವಾರಣೆಯಾಗಲಿದೆ ಎಂದ ಅವರು, ಸಾಮಾಜಿಕ ನ್ಯಾಯಕ್ಕಾಗಿ ರಾಜ್ಯ ಸರಕಾರ ಜಾರಿಗೆ ತರುವ ಬಹುತೇಕ ಯೋಜನೆಗಳನ್ನು ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳು ನಿಭಾಯಿಸುತ್ತವೆ. ಆದರಿಂದ ಇಲಾಖೆಯಲ್ಲಿರುವ ಸಿಬ್ಬಂದಿಗಳು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಅರ್ಹರಿಗೆ ತಲುಪಿಸಬೇಕೆಂದು ಸೂಚಿಸಿದರು.

ನೆರವು ನೀಡಿ:  ಪುರಾತನ ಇಲಾಖೆ ಎಂಬ ಹೆಸರು ಪಡೆದಿರುವ ಕಂದಾಯ ಇಲಾಖೆಗೆ ಅಗತ್ಯ ನೆರವನ್ನು ರಾಜ್ಯ ಸರಕಾರ ನೀಡಬೇಕು. ಸುಮಾರು 47 ಕಾಯ್ದೆಯಡಿ ಕಾರ್ಯನಿರ್ವಹಿಸುವ ಇಲಾಖೆ ಸಿಬ್ಬಂದಿಗಳು, ಚುನಾವಣೆ, ಜನ ಹಾಗೂ ಜಾನುವಾರು ಗಣತಿ ಸೇರಿ ಪ್ರತಿಯೊಂದಕ್ಕೂ ಅಗತ್ಯ. ಆದರೆ, ಬೇರೆ ಇಲಾಖೆಗೆ ಹೋಲಿಸಿದರೆ, ಈ ಇಲಾಖೆಗೆ ಹೆಚ್ಚು ಸವಲತ್ತುಗಳಿಲ್ಲ ಎಂದು ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ವಿಜಯಕುಮಾರ್ ಹೇಳಿದರು.

ಸಮಾವೇಶದಲ್ಲಿ ಸಚಿವರಾದ ಟಿ.ಬಿ ಜಯಚಂದ್ರ, ಕೆ.ಜೆ.ಜಾರ್ಜ್, ರುದ್ರಪ್ಪಲಮಾಣಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಮಣರೆಡ್ಡಿ, ಡಾ. ರಾಜ್‌ಕುಮಾರ್ ಖತ್ರಿ, ಎಂ.ವಿ.ಜಯಂತಿ ಸೇರಿ ಪ್ರಮುಖರು ಹಾಜರಿದ್ದರು. ಇದೇ ವೇಳೆ ಕಂದಾಯ ಇಲಾಖೆ ಜಿಲ್ಲಾ ಮಟ್ಟದ ಕ್ರೀಡೆಗಳಲ್ಲಿ ಜಯಿಸಿದ್ದ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News