ತನಿಖಾ ಸಮಿತಿ ರಚನೆಗೆ ಬಿಜೆಪಿ ಆಗ್ರಹ
ಬೆಂಗಳೂರು, ಜು.6: 2004 ರಿಂದ 2008ರ ತನಕ 692 ವಿದ್ಯುತ್ ಪರಿವರ್ತಕ(ಟಿಸಿ ಕಂಡಕ್ಟರ್ ಇತ್ಯಾದಿ) ಉಪಕರಣಗಳನ್ನು ಖರೀದಿಸಲಾಗಿದ್ದು, ಅವುಗಳನ್ನು 2012ರ ತನಕವೂ ಉಪಯೋಗಿಸದೇ ಇರುವುದು ಸದನ ಸಮಿತಿಗೆ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ ಎಂದು ಬಿಜೆಪಿ ಶಾಸಕ ಶಾಸಕರಾದ ಬಸವರಾಜ ಬೊಮ್ಮಾಯಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಸಂಬಂಧ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ಗೆ ಜು.4ರಂದು ಪತ್ರ ಬರೆದಿರುವ ಶಾಸಕರು, ಕಾಲಮಿತಿಯಲ್ಲಿ ಉಪಕರಣಗಳನ್ನು ಉಪಯೋಗಿಸದೇ ಇರುವುದರಿಂದ ಇದು ಆರ್ಥಿಕ ಹೊರೆಗೆ ಕಾರಣವಾಗಿದೆ. ತಕ್ಷಣ ಉಪಕರಣಗಳನ್ನು ಉಪಯೋಗಿಸಿದ್ದರೆ ಗುಣಮಟ್ಟದ ಕೆಲಸವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ, ಸರಕಾರಕ್ಕೆ ಆರ್ಥಿಕ ನಷ್ಟವೂ ಆಗುತ್ತಿರಲಿಲ್ಲ. ಆದುದರಿಂದ, ಈ ವಿಷಯವನ್ನು ತನಿಖೆಗೆ ಒಳಪಡಿಸಲು ವಿಶೇಷ ತನಿಖಾ ಸಮಿತಿ ರಚಿಸಿ, ಸರಕಾರಕ್ಕೆ ಹಾನಿಯಾಗಿರುವ ಪ್ರಮಾಣ ಎಷ್ಟು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.
ಬಿಜೆಪಿ-ಜೆಡಿಎಸ್ ಕಾದಾಟಕ್ಕೆ ವೇದಿಕೆ: ಇಂಧನ ಇಲಾಖೆಯಲ್ಲಿನ ಅವ್ಯವಹಾರ ಕುರಿತು ತನಿಖೆ ನಡೆಸಲು ಸಮಿತಿಯನ್ನು ರಚಿಸುವಂತೆ ಕೋರಿ ಬಿಜೆಪಿ ಶಾಸಕರು ಪತ್ರ ಬರೆದಿರುವ ಬೆಳವಣಿಗೆಯು, ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಕಾದಾಟಕ್ಕೆ ವೇದಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ವಿದ್ಯುತ್ ಹಾಗೂ ವಿದ್ಯುತ್ ಉಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ಜೆಡಿಎಸ್, ಈ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ರಚಿಸುವಂತೆ ಪಟ್ಟು ಹಿಡಿದಿತ್ತು. ಅದರಂತೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸದನ ಸಮಿತಿಯನ್ನು ರಚಿಸಲಾಗಿದೆ.
ಸದನ ಸಮಿತಿ ತನ್ನ ವರದಿಯನ್ನು ನೀಡುವ ಮುಂಚಿತವಾಗಿಯೆ, ಕಾಂಗ್ರೆಸ್-ಜೆಡಿಎಸ್ ಹಾಗೂ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿ (2004-08)ಯಲ್ಲಿ ನಡೆದಿರುವ ಅವ್ಯವಹಾರದ ತನಿಖೆ ನಡೆಸುವಂತೆ ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ. ಈ ಅವಧಿಯಲ್ಲಿ ಇಂಧನ ಇಲಾಖೆಯ ಜವಾಬ್ದಾರಿಯನ್ನು ಜೆಡಿಎಸ್ ಹಿರಿಯ ನಾಯಕ ಎಚ್.ಡಿ.ರೇವಣ್ಣ ವಹಿಸಿಕೊಂಡಿದ್ದರು.
ಬಿಜೆಪಿ ಶಾಸಕರು ಪತ್ರ ಬರೆದು ತನಿಖಾ ಸಮಿತಿಯನ್ನು ರಚಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿರುವುದು, ಜೆಡಿಎಸ್ ನಾಯಕರನ್ನು ಕೆರಳಿಸುವಂತೆ ಮಾಡಿದೆ. ಮುಂಬರುವ ದಿನಗಳಲ್ಲಿ ಉಭಯ ಪಕ್ಷಗಳ ನಡುವೆ ಈ ವಿಷಯ ಪರಸ್ಪರ ವಾಗ್ವಾದಕ್ಕೆ ಎಡೆ ಮಾಡಿಕೊಡಲಿದೆ ಎಂದು ಹೇಳಲಾಗುತ್ತಿದೆ.