ಮೆಟ್ರೋದಲ್ಲಿ ಹಿಂದಿ ತೆರವಿಗೆ 15 ದಿನಗಳ ಗಡುವು: ಪ್ರೊ.ಎಸ್‌ಜಿಎಸ್
ಬೆಂಗಳೂರು, ಜು.7: ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿರುವ ಹಿಂದಿ ನಾಮಫಲಕಗಳನ್ನು ಮುಂದಿನ 15ದಿನದಲ್ಲಿ ತೆರವುಗೊಳಿಸುವಂತೆ ಬಿಎಂಆರ್‌ಸಿಎಲ್‌ನ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದಿ ಭಾಷೆಯ ಅಗತ್ಯವಿಲ್ಲ. ಉದ್ದೇಶಪೂರ್ವಕವಾಗಿ ಹೇರಿಕೆ ಮಾಡುವ ನಿಟ್ಟಿನಲ್ಲಿ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಹಿಂದಿ ನಾಮಫಲಕಗಳನ್ನು ಹಾಕಲಾಗಿದೆ ಎಂದು ತಿಳಿಸಿದರು.
ಮೆಟ್ರೋ ನಿಗಮವು ರಾಜ್ಯ ಸರಕಾರದ ಸ್ವಾಯತ್ತ ಸಂಸ್ಥೆಯಾಗಿದೆ. ಇಲ್ಲಿ ಯಾವ ಭಾಷೆ ಇರಬೇಕು ಎಂಬುದನ್ನು ರಾಜ್ಯ ಸರಕಾರ ನಿರ್ಧರಿಸಬೇಕೆ ಹೊರತು ಕೇಂದ್ರ ಸರಕಾರವಲ್ಲ. ಪ್ರಾದೇಶಿಕ ಭಾಷೆಗಳ ಉಳಿವಿಗೆ ಕೇಂದ್ರ ಸರಕಾರ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿತ್ತು. ಆದರೆ, ನಮ್ಮ ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗಳ ವಿರುದ್ಧವಾದ ನಡೆಯನ್ನು ಪ್ರದರ್ಶಿಸುತ್ತಿದೆ ಎಂದು ಅವರು ವಿಷಾದಿಸಿದರು.