ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶ

Update: 2017-07-07 15:49 GMT

ಬೆಂಗಳೂರು, ಜು.7: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳನ್ನು ಪೀಠದಿಂದ ಕೆಳಗಿಳಿಸಬೇಕು ಎಂಬ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಸಿ. ಖುಂಟಿಆ ನೀಡಿರುವ ಆದೇಶ ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಲಾಗಿದೆ. ಈ ಸಂಬಂಧ ರಾಘವೇಶ್ವರ ಶ್ರೀಗಳು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಮುಜರಾಯಿ ಇಲಾಖೆ ಕಾರ್ಯದರ್ಶಿ ಹಾಗೂ ಆಯುಕ್ತರು, ಎದುರ್ಕುಳ ಈಶ್ವರ ಭಟ್ ಮತ್ತು ಎ.ಕೆ.ಜಯಕೃಷ್ಣ ಅವರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ. ಮಠದ ಪರ ವಾದಿಸಿದ ವಕೀಲರು, ರಾಘವೇಶ್ವರ ಶ್ರೀಗಳನ್ನು ಪೀಠದಿಂದ ಕೆಳಗಿಳಿಸುವಂತೆ ಕೋರಿದ್ದ ಪಿಐಎಲ್ ಅನ್ನು ಹೈಕೋಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕೆಂದು ಆದೇಶಿಸಿತ್ತು.


ಇದನ್ನು ವಿಚಾರಣೆ ನಡೆಸಿದ್ದ ಖುಂಟಿಆ ಅವರು ಸ್ವಾಮೀಜಿ ವಿರುದ್ಧದ ಆರೋಪಗಳ ಕುರಿತಂತೆ ಮುಜರಾಯಿ ಇಲಾಖೆ ಆಯುಕ್ತರು ವಿಚಾರಣೆ ನಡೆಸಬೇಕು ಎಂದು ಸೂಚಿಸಿದ್ದಾರೆ. ಇದು ಕಾನೂನು ಬಾಹಿರ. ತಮ್ಮ ಅಧಿಕಾರವನ್ನು ಬಳಸಲು ತಮ್ಮ ಅಧಿಕಾರ ಚಲಾಯಿಸಲು ಇನ್ನೊಬ್ಬರಿಗೆ ಅವಕಾಶ ನೀಡಿರುವುದು ಹೈಕೋರ್ಟ್ ಆದೇಶದ ಉಲ್ಲಂಘನೆ ಎಂದು ಪ್ರತಿಪಾದಿಸಿದರು.


ಮಠಗಳ ವ್ಯಾಪ್ತಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ ಅಡಿ ಬರುವುದಿಲ್ಲ. ಹೀಗಾಗಿ, ಮುಖ್ಯ ಕಾರ್ಯದರ್ಶಿ ಆದೇಶವನ್ನು ದ್ದುಪಡಿಸಬೇಕೆಂದು ಕೋರಿದರು.
ಸರಕಾರಿ ಪರ ವಕೀಲರು ವಾದಿಸಿ, ಸರಕಾರ ಹೈಕೋರ್ಟ್ ಆದೇಶ ಪಾಲಿಸುತ್ತಿದೆ. ಮುಜರಾಯಿ ಇಲಾಖೆ ಆಯುಕ್ತರು ರಚಿಸುವ ಸಮಿತಿ ಕೇವಲ ಸತ್ಯಶೋಧನಾ ಸಮಿತಿಯಾಗಿರುತ್ತದೆ. ಈ ಸಮಿತಿಯು ಕೇವಲ ಲೆಕ್ಕಪತ್ರಗಳ ಪರಿಶೋಧನೆ ನಡೆಸಿ ವರದಿ ನೀಡುತ್ತದೆ. ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ, ಮುಖ್ಯ ಕಾರ್ಯದರ್ಶಿ ಆದೇಶಕ್ಕೆ ಮಧ್ಯಂತರ ತಡೆ ನೀಡಬಾರದು. ಪ್ರಕರಣದಲ್ಲಿ ಎಜಿ ಅವರು ಮಂಡಿಸಲಿದ್ದಾರೆ. ಅದಕ್ಕೆ ಸಮಯಾವಕಾಶ ನೀಡ ಬೇಕು ಎಂದು ಮನವಿ ಮಾಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News