ಮಾನಸಿಕ ಖಿನ್ನತೆ: ಗೃಹಣಿ ಆತ್ಮಹತ್ಯೆ
ಬೆಂಗಳೂರು, ಜು.8: ಮಾನಸಿಕ ಖಿನ್ನತೆಯಿಂದಲೇ ಕೆಂಪೇಗೌಡನಗರದ ಸಮೀರಪುರದ ಗೃಹಿಣಿ ಮಂಗಳ ತನ್ನ ಐದು ವರ್ಷದ ಮಗಳು ಸನ್ನಿಧಿಯನ್ನು ನೇಣುಬಿಗಿದು ಕೊಲೆಮಾಡಿ ತಾನೂ ನೇಣಿಗೆ ಶರಣಾಗಿರುವುದು ತನಿಖೆಯಿಂದ ಕಂಡುಬಂದಿದೆ. ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದ ಶಂಕರ್ ಅವರನ್ನು ವಿವಾಹವಾಗಿದ್ದ ಮಂಗಳ ಖಿನ್ನತೆಯಿಂದ ಬಳಲುತ್ತಿದ್ದರು. ಹೀಗಾಗಿ, ಮಂಗಳ ಅವರಿಗೆ ಮಾನಸಿಕ ಖಿನ್ನತೆಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಖಿನ್ನತೆಯಿಂದಾಗಿ ಆಕೆ ಶುಕ್ರವಾರ ಬೆಳಗ್ಗೆ ಶಂಕರ್ ಕೆಲಸಕ್ಕೆ ಹೋದ ನಂತರ ಸನ್ನಿಧಿಯನ್ನು ನೇಣಿಗೇರಿಸಿ ಬಳಿಕ ಗೃಹಿಣಿ ಮಂಗಳ ಪಕ್ಕದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಶಂಕರ್ ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಎಷ್ಟು ಬಾಗಿಲು ಬಡಿದರೂ ತೆಗೆಯದಿದ್ದರಿಂದ ಆತಂಕಗೊಂಡು ಕಿಟಕಿಯಲ್ಲಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಮಂಗಳ ಆವರು ಕೈಮೇಲೆ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದುಕೊಂಡಿದ್ದಾರೆ, ಅವರ ಕೃತ್ಯಕ್ಕೆ ಶಂಕರ್‌ಗೆ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧವಿತ್ತು ಎನ್ನುವುದನ್ನು ಪೊಲೀಸರು ನಿರಾಕರಿಸಿದ್ದಾರೆ. ಈ ಮೊಕದ್ದಮೆ ದಾಖಲಿಸಿಕೊಂಡಿರುವ ಕೆ.ಜಿ.ನಗರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.