ಎಚ್ಚರ: ಸಂಚಾರ ನಿಯಮ ಉಲ್ಲಂಘಿಸಿದರೆ ಹೆದ್ದಾರಿ ಗಸ್ತು ತಿರುಗುವ ಪೊಲೀಸರೂ ವಿಧಿಸಲಿದ್ದಾರೆ ದಂಡ
Update: 2017-07-08 12:54 GMT
ಬೆಂಗಳೂರು, ಜು.8: ವಾಹನ ಸವಾರರು ರಾಜ್ಯದ ಹೆದ್ದಾರಿಗಳಲ್ಲಿ ಸಂಚರಿಸುವಾಗ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಇನ್ನು ಮುಂದೆ ಹೆದ್ದಾರಿ ಗಸ್ತು ತಿರುಗುವ ಪೊಲೀಸರೂ ದಂಡ ವಿಧಿಸಲಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ ಗಸ್ತು ಪೊಲೀಸರಿಗೂ ದಂಡ ವಿಧಿಸುವ ಅವಕಾಶ ಕಲ್ಪಿಸಿ, ಆದೇಶ ಹೊರಡಿಸಿದ್ದಾರೆ.
ಇದುವರೆಗೂ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಹಾಗೂ ಚಾಲಕರ ವಿರುದ್ಧ ಕೇಸ್ ದಾಖಲಿಸುವ ಅಧಿಕಾರ ಸಂಚಾರ ಪೊಲೀಸರಿಗೆ ಮಾತ್ರ ನೀಡಲಾಗಿತ್ತು. ಅದರಲ್ಲೂ ಈ ಸಂಚಾರಿ ಪೊಲೀಸರು ಕಮಿಷನರೇಟ್ ಹಾಗೂ ನಗರದ ಪ್ರದೇಶದಲ್ಲಿ ಮಾತ್ರ ದಂಡ ವಿಧಿಸುತ್ತಿದ್ದರು.
ಆದರೆ ಇದೀಗ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಹೆದ್ದಾರಿಯ ಗಸ್ತು ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುವ ಎಎಸ್‌ಐಗಳಿಗೆ ಸಂಚಾರ ನಿಯಮ ಉಲ್ಲಂಘಿಸುವ ಸವಾರರಿಗೆ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ. ಇದರಿಂದ ಮದ್ಯ ಸೇವಿಸಿ ವಾಹನ ಚಲಾಯಿಸುವ ಸವಾರರು ಹಾಗೂ ವೇಗ ಹಾಗೂ ನಿರ್ಲಕ್ಷತನದಿಂದ ವಾಹನ ಚಲಾಯಿಸುವ ಚಾಲಕರಿಗೆ ಕಡಿವಾಣ ಬೀಳಲಿದೆ.