ಮಕ್ಕಳ ಮೇಲಿನ ಪೂರ್ವಗ್ರಹ ಪೀಡಿತ ಯೋಚನೆಗಳಿಂದ ಹೊರಬನ್ನಿ: ಜಿ.ಎನ್.ನಾಗರಾಜ್
ಬೆಂಗಳೂರು, ಜು.8: ಪೋಷಕರು ಮಕ್ಕಳ ಮೇಲಿಟ್ಟಿರುವ ಪೂರ್ವಗ್ರಹ ಪೀಡಿತ ಯೋಚನೆಗಳನ್ನು ಕಿತ್ತುಹಾಕಿ, ಮಾನವೀಯತೆಯ ಹಿನ್ನೆಲೆಯಲ್ಲಿ ಯೋಚನೆ ಮಾಡಬೇಕು ಎಂದು ಚಿಂತಕ ಜಿ.ಎನ್.ನಾಗರಾಜ್ ಅಭಿಪ್ರಾಯಿಸಿದ್ದಾರೆ.
ಶನಿವಾರ ನಗರದ ಎಸ್‌ಸಿಎಂ ಹೌಸ್‌ನಲ್ಲಿ ಆಯೋಜಿಸಿದ್ದ ಚಂಪಾ ಜಯಪ್ರಕಾಶ್ ಅವರ ‘21 ನೆ ಕ್ರೋಮೊಸೋಮ್ ಮತ್ತು ಇತರೆ ಕಥೆಗಳು’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಇತ್ತೀಚಿಗೆ ಪೋಷಕರು ನಮಗೆ ಹುಟ್ಟುವ ಮಕ್ಕಳು ಡಾಕ್ಟರ್, ಎಂಜಿನಿಯರ್ ಅಥವಾ ಸರಕಾರಿ ಅಧಿಕಾರಿಯಾಗಬೇಕು ಎಂದು ಕನಸು ಕಾಣುತ್ತಾರೆ. ಅದಕ್ಕಾಗಿ ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ ಎಂದು ಹೇಳಿದರು.
ಮಕ್ಕಳ ಮೇಲೆ ಅಪಾರವಾದ ಪೂರ್ವಗ್ರಹ ಪೀಡಿತ ಆಲೋಚನೆ ಮಾಡುವುದರಿಂದ ಅನಿವಾರ್ಯವಾಗಿ ಜನಿಸುವ ಅಂಗವಿಕಲ ಮಕ್ಕಳ ನೂರಾರು ಕನಸುಗಳು ಸಣ್ಣದರಲ್ಲಿಯೇ ಭಸ್ಮವಾಗುತ್ತಿವೆ. ಅಂಗವಿಕಲ ಮಕ್ಕಳು ಎಂದು ತಿಳಿದ ತಕ್ಷಣ ಅವರನ್ನು ಮನೆಯ ಮೂಲೆಯಲ್ಲಿ ಸ್ಥಾನ ನೀಡುತ್ತಿದ್ದಾರೆ. ಆ ಮಕ್ಕಳಲ್ಲಿರುವ ಸಾಮರ್ಥ್ಯ, ತಿಳುವಳಿಕೆ ಮಟ್ಟ ಏನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿಗೆ ಅಶ್ವಿನ್ ಎಂಬ ಅಂಗವಿಕಲ ವ್ಯಕ್ತಿ ಮನೆಯಲ್ಲಿ ಪೋಷಕರು ನಿನ್ನಿಂದ ಏನು ಮಾಡೋಕೆ ಆಗಲ್ಲ ಎಂದು ಛೇಡಿಸಿದ್ದ ಪೋಷಕರಿಗೆ ಒಂದು ಕಂಪೆನಿಯ ಮಾಲಕನಾಗಿ ಸಾಧನೆ ಮಾಡಿ ತೋರಿಸಿದ್ದಾನೆ. ಇಂತಹ ಸಾಮರ್ಥ್ಯವುಳ್ಳವರು ಹಲವಾರು ಜನರಿದ್ದಾರೆ. ಆದರೆ, ಪೋಷಕರ ನಿರ್ಲಕ್ಷದಿಂದ ಅವರ ಸಾಮರ್ಥ್ಯ ಹೊರಗಡೆ ಬರುತ್ತಿಲ್ಲ. ಹೀಗಾಗಿ ಪೋಷಕರು ಅಂಗವಿಕಲ ಮಕ್ಕಳನ್ನು ನಿರ್ಲಕ್ಷಿಸುವುದರ ಬದಲಿಗೆ ಅವರ ಕನಸು ಮತ್ತು ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಅಂಗವಿಕಲ ಮಗುವಿನ ತಾಯಿ ಶ್ರೀದೇವಿ ಮಾತನಾಡಿ, ಸಾಮಾನ್ಯರಂತೆ ನಮಗೂ ಮಗು ಹುಟ್ಟಿದಾಗ ಹಲವಾರು ಆಸೆಗಳಿದ್ದವು. ಆದರೆ, ಮಗು ಹುಟ್ಟಿದ 14 ತಿಂಗಳವರೆಗೂ ಯಾವುದೇ ಬೆಳವಣಿಗೆ ಕಾಣಲಿಲ್ಲ. ನಮಗೂ ತುಂಬಾ ಬೇಸರವೆನಿಸಿತು. ಆದರೆ, ನಾವು ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ನಮ್ಮ ಮಗಳಿಗಾಗಿರುವ ಸಮಸ್ಯೆ ಕುರಿತು ವೈದ್ಯರಿಗೆ ತೋರಿಸಿದೆವು. ವೈದ್ಯರ ಸಲಹೆ ಪಡೆದುಕೊಂಡು, ಪ್ರತಿ 15 ದಿನಕ್ಕೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೆ. ಮಗು ಬೆಳೆಯಬೇಕು ಎಂಬ ಉದ್ದೇಶದಿಂದ ಯಾವುದೇ ಭೇದ-ಭಾವ ಮಾಡದೆ, ಹಣಕ್ಕೂ ಲೆಕ್ಕವಿಡದೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಮಾಡಿಸಿದೆವು. ದಿನದಲ್ಲಿ 6 ಗಂಟೆಗಳ ಕಾಲ ಮಗುವಿನ ಆರೈಕೆ ಮಾಡುತ್ತಿದೆ. ಇದರಿಂದಾಗಿ ಐದು ವರ್ಷಗಳಲ್ಲಿ ಮಗು ಚೇತರಿಸಿಕೊಂಡಿತು. ಆದರೆ, ಈ ಮಗುವಿಗೆ ಶಿಕ್ಷಣ ನೀಡಲು ಯಾವುದೇ ಸಂಸ್ಥೆಗಳು ಪ್ರವೇಶ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ಸಂದರ್ಭದಲ್ಲಿಯೂ ಬೇಸರ ಪಟ್ಟುಕೊಳ್ಳದೆ ಮಗುವನ್ನು ಬೇರೆ ಶಾಲೆಗೆ ಸೇರಿಸಿದೆವು ಎಂದ ಅವರು, ಸುಮಾರು 20 ವರ್ಷಗಳ ಕಾಲ ಮಗಳಿಗಾಗಿ ಪಟ್ಟ ಶ್ರಮದ ಪರಿಣಾಮವಿಂದು ನಗರದ ಆಂಧ್ರಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿ ದುಡಿಯುತ್ತಿದ್ದಾಳೆ. ಹೀಗಾಗಿ ಜೀವನದಲ್ಲಿ ಮಕ್ಕಳ ಬಗ್ಗೆ ಗೌರವ ಮತ್ತು ಪ್ರೀತಿ ಇರಬೇಕು. ಎಂತಹ ಮಗುವೇ ಆಗಲಿ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಯುತ್ತಾರೆ ಎಂಬ ಆತ್ಮವಿಶ್ವಾಸವಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ.ಎಂ.ಸಿದ್ದರಾಜು, ನಿವೃತ್ತ ಇಂಗ್ಲೀಷ್ ಅಧ್ಯಾಪಕ ಪ್ರೊ.ವಿ.ಎನ್.ಲಕ್ಷ್ಮಿನಾರಾಯಣ, ಸಾಧನೆ ಮಾಡಿದ ವಿಶೇಷ ಚೇತನ ಶ್ರವಂತಿ, ಲೇಖಕಿ ಚಂಪಾ ಜಯಪ್ರಕಾಶ್ ಉಪಸ್ಥಿತರಿದ್ದರು.