ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ-ದಲಿತ ಸಂಘಟನೆಗಳಿಂದ ಆ.21ರಂದು ರಾಜ್ಯಾದ್ಯಂತ ಪ್ರತಿಭಟನೆ

Update: 2017-07-10 12:56 GMT

ಬೆಂಗಳೂರು, ಜು. 10: ರೈತರ ಸಂಪೂರ್ಣ ಸಾಲ ಮನ್ನಾ, ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹಿಸಿ ಹಾಗೂ ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧ ಮಸೂದೆಯನ್ನು ವಿರೋಧಿಸಿ ರೈತರು-ಕೃಷಿ ಕಾರ್ಮಿಕರು ಮತ್ತು ದಲಿತ ಸಂಘಗಳ ಒಕ್ಕೂಟ ಆ.21ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಸೋಮವಾರ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ರೈತರು-ಕೃಷಿ ಕಾರ್ಮಿಕರು ಮತ್ತು ದಲಿತರ ರಾಜ್ಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿವಿಧ ರೈತ, ಕೃಷಿ ಕಾರ್ಮಿಕ ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಲು ನಿರ್ಣಯ ಕೈಗೊಂಡರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಚಾಮರಸ ಪಾಟೀಲ ಮಾತನಾಡಿ, ಸಹಕಾರಿ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದರ ಜೊತೆಗೆ ರಾಷ್ಟ್ರೀಯ ಬ್ಯಾಂಕುಗಳು ಮತ್ತು ಖಾಸಗಿ ವಲಯದ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಡಾ.ಎಂ.ಎಸ್.ಸ್ವಾಮಿನಾಥನ್ ಕೃಷಿ ಆಯೋಗದ ಶಿಫಾರಸ್ಸಿನಂತೆ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕೂಡಲೆ ಘೋಷಿಸಬೇಕು. ಸೂಕ್ತ ಸಮಯದಲ್ಲಿ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ವಿತರಿಸದಿದ್ದರೆ ಇನ್ನು ಮುಂದೆ ರೈತರು ಸಾಲ ಮರು ಪಾವತಿ ಮಾಡುವುದಿಲ್ಲ ಎಂಬ ಗಟ್ಟಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಪಯುಕ್ತ ಜಾನುವಾರುಗಳನ್ನು ಸಾಕುವುದೆ ಇಂದು ರೈತರಿಗೆ ದೊಡ್ಡ ಹೊರೆಯಾಗಿದೆ. ಇನ್ನು ನಿಷ್ಪ್ರಯೋಜಕ ಜಾನುವಾರುಗಳನ್ನು ಇಟ್ಟುಕೊಂಡರೆ ರೈತರು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಲಿದ್ದಾರೆ. ಹತ್ಯೆಗಾಗಿ ಜಾನುವಾರು ನಿಷೇಧ ಮಸೂದೆಯನ್ನು ಜಾರಿಗೆ ತರುವ ಮುನ್ನ ಕೇಂದ್ರ ಸರಕಾರ ಮೊದಲು ರೈತರಿಗಾಗುವ ಪರಿಣಾಮದ ಕುರಿತು ವಿವೇಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜು ಮಾತನಾಡಿ, ರೈತರ ಸಾಲ ಮನ್ನಾ ಮಾಡುವ ರಾಜ್ಯಗಳಿಗೆ ನೆರವು ನೀಡುವುದಿಲ್ಲ ಎಂದು ಕೇಂದ್ರ ಸರಕಾರ ಬಾಲಿಶ ಹೇಳಿಕೆಯನ್ನು ನೀಡುತ್ತಿದ್ದಾರೆ. ಬಿಜೆಪಿ ಸರಕಾರ ರೈತ ವಿರೋಧಿ ಸರಕಾರ ಎಂದು ಕಿಡಿ ಕಾರಿದರು.
ರೈತರ ಸಾಲ ಮನ್ನಾ ಮಾಡಿದರೆ ದೇಶ ಆರ್ಥಿಕವಾಗಿ ದಿವಾಳಿಯಾಗಲಿದೆ ಎಂದು ಗೋಸುಂಬೆ ಮಾತುಗಳನ್ನು ಬಿಜೆಪಿ ಸರಕಾರದ ಮಂತ್ರಿಗಳು ಆಡುತ್ತಿದ್ದಾರೆ. ಖಾಸಗಿ ಕಂಪೆನಿಗಳ ದೊಡ್ಡ ಮೊತ್ತದ ಸಾಲ ಮನ್ನಾ ಹಾಗೂ ತೆರಿಗೆ ವಿನಾಯಿತಿ ನೀಡಿದರೆ ದೇಶ ಉದ್ಧಾರವಾಗುತ್ತಾ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರು, ಕೃಷಿ ಕಾರ್ಮಿಕರ ಮತ್ತು ದಲಿತರ ಸಾಲ ಮನ್ನಾ ಮಾಡಲು ಕೇಂದ್ರ ಸರಕಾರ ಮುಂದಾಗಬೇಕು. ನಮ್ಮ ಈ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆ.21ರಂದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸಮಾವೇಶದಲ್ಲಿ ರಾಜ್ಯ ದಲಿತ ಸಂಘಗಳ ಸಮನ್ವಯ ಸಮಿತಿಯ ಸದಸ್ಯರಾದ ಎನ್.ಮುನಿಸ್ವಾಮಿ, ಮಾವಳ್ಳಿ ಶಂಕರ್, ಎನ್.ಮೂರ್ತಿ, ಪ್ರಾಂತ ರೈತ ಸಂಘದ ಅಧ್ಯಕ್ಷ ಬಯ್ಯಾರೆಡ್ಡಿ, ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News