ಜಾನಪದ ಕ್ಷೇತ್ರದ ಉಳಿವಿಗೆ ಸರಕಾರ ಸದಾ ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-07-10 16:01 GMT

ಬೆಂಗಳೂರು, ಜು.10: ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಹಾಗೂ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಸರಕಾರದಿಂದ ಯಾವುದೇ ರೀತಿಯ ಬೆಂಬಲ ನೀಡಲು ಸದಾ ಸಿದ್ಧವಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಆಯೋಜಿಸಿದ್ದ ಕರ್ನಾಟಕ ತತ್ವಪದಕಾರರ ಸಮಗ್ರ ಸಾಹಿತ್ಯ ಪ್ರಕಟನಾ ಯೋಜನೆಯ ಮೂವತ್ತೆರಡು ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯವನ್ನು ಉಳಿಸಿ-ಬೆಳೆಸುವ ಮೂಲಕ ನಮ್ಮ ಸಾಹಿತ್ಯವನ್ನು ಜೀವಂತವಾಗಿಡಬೇಕು. ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ದಿನ ಬೆಳಗ್ಗೆ ಭಜನೆ ಮಾಡುತ್ತಿದ್ದರು. ಆದರೆ, ಕಾಲ ಬದಲಾದಂತೆ ಭಜನೆ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಹೀಗಾಗಿ ನಮ್ಮ ಹಿಂದಿನ ಕಾಲದ ಸಾಹಿತ್ಯ ಮತ್ತು ಕಲಾ ಸಂಸ್ಕೃತಿಯನ್ನು ಮರು ಸ್ಥಾಪಿಸಬೇಕು. ಅದಕ್ಕೆ ರಾಜ್ಯ ಸರಕಾರದಿಂದ ಬೇಕಾದ ಎಲ್ಲ ಸಹಕಾರ ನೀಡಲು ಸಿದ್ಧವಿದೆ ಎಂದರು.

ಜೀವನದ ಮೌಲ್ಯಗಳನ್ನು, ನಮ್ಮ ಬದುಕಿನ ದರ್ಶನವನ್ನು ಈ ತತ್ವ ಪದಗಳು ತೋರಿಸಿಕೊಡುತ್ತವೆ. ಅಲ್ಲದೆ, ಅರ್ಥಪೂರ್ಣವಾದ ಬದುಕು ಅಳವಡಿಸಿಕೊಳ್ಳ ಬೇಕಾದರೆ ಹಾಗೂ ಮಾನವೀಯ ನೆಲೆಯಲ್ಲಿ ಬದುಕು ರೂಪಿಸಿಕೊಳ್ಳಬೇಕಾದರೆ ಇಂತಹ ಪುಸ್ತಕಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಗತ್ಯವಾಗಿದೆ. ಆದರೆ, ಇದುವರೆಗೂ ಕನ್ನಡ ಸಾಹಿತ್ಯದಲ್ಲಿ ಇತರೆ ಸಾಹಿತ್ಯಕ್ಕೆ ಸಿಕ್ಕಿದ ಮಹತ್ವ ಹಾಗೂ ಬೆಂಬಲ ತತ್ವ ಪದಗಳಿಗೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂಪಾದನಾ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಪ್ರೊ.ಕೆ.ಮರುಳಸಿದ್ದಪ್ಪ ಮಾತನಾಡಿ, ಇದುವರೆಗೂ ನಮ್ಮ ಸಾಹಿತ್ಯದಲ್ಲಿ ತತ್ವ ಪದಗಳಂತ ಸಾಹಿತ್ಯ ಬೇರೆ ಯಾವುದೂ ಬಂದಿಲ್ಲ. ಇವು ಜೀವನದ ಕ್ರಿಯೆಯಲ್ಲಿ ಒಂದಾಗಿದ್ದು, ಸದಾ ಜೀವಂತವಾಗಿರುವ ಸಾಹಿತ್ಯವಾಗಿದೆ. ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಾಹಿತ್ಯ ಇದಾಗಿದೆ ಎಂದು ಹೇಳಿದರು.

ತತ್ವ ಪದಗಳು ಅತ್ಯಂತ ವಿಸ್ತಾರವಾಗಿದ್ದು, ದೀರ್ಘಕಾಲಿನವಾದುದಾಗಿದೆ. ಜಾತಿ, ಭಾಷೆ, ಧರ್ಮ, ಲಿಂಗ, ಭೌಗೋಳಿಕತೆಯನ್ನು ಮೀರಿದವರು ಮಾತ್ರ ತತ್ವ ಪದಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು, ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು ಆವರಣವಾಗಿ ತತ್ವ ಪದಗಳನ್ನು ನೋಡಬಹುದಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಕೆ.ಜೆ.ಜಾರ್ಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News