ಎನ್‌ಐಎ ತನಿಖೆ ಅಗತ್ಯವಿಲ್ಲ: ಮುಖ್ಯಮಂತ್ರಿ
ಕಲಬುರಗಿ, ಜು.11: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಗಲಭೆ ಪ್ರಕರಣಗಳ ಕುರಿತು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸುವ ಅಗತ್ಯವಿಲ್ಲ. ರಾಜ್ಯದ ಪೊಲೀಸರೇ ಸಮರ್ಥವಾಗಿ ತನಿಖೆ ನಿರ್ವಹಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಷಂಡರು, ಯಾರು ಗಂಡಸರು ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಬಗ್ಗೆ ವಿಷಯ ಪ್ರಸ್ತಾಪಿಸಿರುವ ಬಿಜೆಪಿ ಮುಖಂಡರೇ ಉತ್ತರಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಗಲಭೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಸಚಿವ ಯು.ಟಿ.ಖಾದರ್ ಕಾರಣ ಎಂದು ಬಿಜೆಪಿ ಮುಖಂಡರು ಮಾಡುತ್ತಿರುವ ಆರೋಪಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ, ಬಿಜೆಪಿ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರದ್ದು ತೋಳ ಮತ್ತು ಕುರಿ ಮರಿ ಕಥೆಯಾಗಿದೆ. ತಮ್ಮ ಬೆಂಬಲಿತ ಸಂಘಟನೆಗಳಿಗೆ ಸುಮ್ಮನಿರಲು ಹೇಳಿದರೆ ಸಾಕು, ಪರಿಸ್ಥಿತಿ ಹತೋಟಿಗೆ ಬರುತ್ತದೆ. ನಿಷೇಧಾಜ್ಞೆ ಜಾರಿಯಲ್ಲಿದ್ದ ಸಂದರ್ಭದಲ್ಲಿಯೆ ಸಂಸದರಾದ ಶೋಭಾ ಕರಂದ್ಲಾಜೆ, ನಳೀನ್‌ಕುಮಾರ್ ಕಟೀಲ್ ಸೇರಿದಂತೆ ಇನ್ನಿತರರು ಗಲಭೆ ಪೀಡಿತ ಪ್ರದೇಶಕ್ಕೆ ಹೋಗುವ ಅಗತ್ಯವೇನಿತ್ತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಗಲಭೆ ಸೃಷ್ಟಿಸುವ ಯಾವುದೇ ಸಂಘಟನೆಗಳಿರಲಿ ಅವುಗಳ ವಿರುದ್ಧ ಕಾನೂನು ರೀತಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಗಲಭೆ ಪ್ರಕರಣದ ಕುರಿತು ನಮ್ಮ ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ. ಆದುದರಿಂದ, ರಾಷ್ಟ್ರೀಯ ತನಿಖಾ ದಳಕ್ಕೆ ಇದರ ಜವಾಬ್ದಾರಿ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮೋಡ ಬಿತ್ತನೆ : ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕಾವೇರಿ, ತುಂಗಭದ್ರಾ ಸೇರಿದಂತೆ ಇನ್ನಿತರ ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕೆ ಮತ್ತಷ್ಟು ಜಿಲ್ಲೆಗಳ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗುವುದು. ಸಚಿವ ಸಂಪುಟವನ್ನು ಪುನರ್ ರಚನೆ ಮಾಡುವುದಿಲ್ಲ. ಖಾಲಿಯಿರುವ ಮೂರು ಸ್ಥಾನಗಳನ್ನಷ್ಟೇ ಭರ್ತಿ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.
ಶೋಭಾ ವಿರುದ್ಧ ವಾಗ್ದಾಳಿ
ಕಲಬುರಗಿ: ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿಯನ್ನು ‘ಬಚ್ಚಾ’ ಎಂದಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಹುಲ್‌ಗಾಂಧಿ ಬಗ್ಗೆ ಮಾತನಾಡಲು ಶೋಭಾ ಕರಂದ್ಲಾಜೆ ಯಾರು. ರಾಹುಲ್‌ಗಾಂಧಿ ದೊಡ್ಡ ನಾಯಕ, ಭವಿಷ್ಯದ ಪ್ರಧಾನ ಮಂತ್ರಿಯಾಗಲಿರುವ ಅವರ ಬಗ್ಗೆ ಹಗರುವಾಗಿ ಮಾತನಾಡುವುದು ಸರಿಯಲ್ಲ ಎಂದರು.