ಜೈಲು ದೌರ್ಜನ್ಯದ ವಿರುದ್ಧ ಎಚ್ಚೆತ್ತ ಸರಕಾರ

Update: 2017-07-17 18:34 GMT

ಮುಂಬೈಯ ಭೈಖಲಾ ಮಹಿಳಾ ಜೈಲ್‌ನಲ್ಲಿ ಜೈಲ್ ಸಿಬ್ಬಂದಿಯಿಂದ ಥಳಿಸಲ್ಪಟ್ಟು ಮಂಜುಳಾ ಶೇಟ್ಯೆ ಎನ್ನುವ ಕೈದಿ ಸಾವನ್ನಪ್ಪಿದ ಘಟನೆ ಈಗ ಜೈಲುಗಳಲ್ಲಿ ಮಹಿಳಾ ಕೈದಿಗಳ ಶೋಚನೀಯ ಸ್ಥಿತಿಯನ್ನು ಬಹಿರಂಗ ಪಡಿಸಿದೆ. ಸಮಾಜ ಸೇವಕರು, ವಕೀಲರು ಮಾತ್ರವಲ್ಲ ಮಾಜಿ ಜೈಲು ಅಧಿಕಾರಿಗಳೂ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಜೈಲ್ ಸಿಬ್ಬಂದಿ ಮಹಿಳಾ ಕೈದಿಗಳ ಜೊತೆ ನಿರಂತರ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

‘‘ನಾನು ಜೈಲುಗಳಿಗೆ ಅನಿರೀಕ್ಷಿತ ನಿರೀಕ್ಷಣೆಗೆ ಬರುತ್ತೇನೆ. ಮೊದಲೇ ಹೇಳಿದರೆ ಅವರು ಆ ಜೈಲನ್ನು ಆದರ್ಶ ಜೈಲು ಎಂದು ಪರಿವರ್ತಿಸಿ ಬಿಡುತ್ತಾರೆ. ಹೀಗಾಗಿ ಹೇಳದೆ ಭೇಟಿ ನೀಡಬೇಕು. ನಾವು ಎಲ್ಲಾ ಜೈಲುಗಳ ಸುಪರೆಂಟೆಂಡೆಂಟ್‌ನ ಜೊತೆಗೆ ಜೈಲು ಸುಧಾರಣೆಗೂ ಕಾರ್ಯಾ ಗಾರ ಮಾಡುತ್ತಿರುತ್ತೇವೆ. ನಾವು ರಾಜ್ಯ ಜೈಲ್ ವಿಭಾಗಕ್ಕೆ ಈ ಸಾವಿನ ವಿಷಯವಾಗಿ ರಿಪೋರ್ಟ್ ನೀಡುವಂತೆ ಹೇಳಿದ್ದೇವೆ. ಶೇಟ್ಯೆ ಸಾವು ದೌರ್ಭಾಗ್ಯಕರ ಆಗಿದೆ.’’ ಎಂದಿದ್ದಾರೆ ನಿವೃತ್ತ ನ್ಯಾಯಾಧೀಶ ಮತ್ತು ಮಹಾರಾಷ್ಟ್ರ ಸ್ಟೇಟ್ ಹ್ಯೂಮನ್ ರೈಟ್ಸ್ ಕಮಿಶನ್ ಚೆಯರ್‌ಮ್ಯಾನ್ ಎಸ್.ಆರ್. ಬನ್ನೂರ್‌ಮಠ.

ಜೈಲ್ ಸ್ಟಾಫ್ ಮಂಜುಳಾ ಶೇಟ್ಯೆಯನ್ನು ಅಮಾನವೀಯ ರೀತಿಯಲ್ಲಿ ಥಳಿಸಿದ್ದರು. ಆಸ್ಪತ್ರೆಗೆ ಒಯ್ಯುವ ಮೊದಲೇ ಆಕೆ ಸಾವನ್ನಪ್ಪಿದ್ದಳು. ಈ ಸಾವು ಭಾರತೀಯ ಜೈಲುಗಳಲ್ಲಿ ಕೈದಿಗಳ ನರಕ ಸಾದೃಶ್ಯ ಬದುಕಿಗೆ ಕನ್ನಡಿ ಹಿಡಿದಿದೆ. ಕೈದಿಗಳ ಜೊತೆ ಪ್ರತೀದಿನ ಮಾರಾಮಾರಿ ನಡೆಸಲಾಗುತ್ತಿದೆ. ಮೂಲಭೂತ ಸೌಕರ್ಯಗಳನ್ನೂ ನೀಡದ ಈ ಜೈಲ್‌ನಲ್ಲಿ ಘಟನೆಯ ಮರುದಿನ ಈ ಅಮಾನವೀಯ ಸಾವನ್ನು ವಿರೋಧಿಸಿ ಇತರ ಕೈದಿಗಳಿಂದ ಪ್ರತಿಭಟನೆ ನಡೆಯಿತು. ಜೈಲ್ ಸಿಬ್ಬಂದಿ 200 ಕೈದಿಗಳ ವಿರುದ್ಧ ಹಿಂಸೆ ಮತ್ತು ಜೈಲ್‌ನ ಆಸ್ತಿಪಾಸ್ತಿ ಹಾನಿಗೊಳಿಸಿದ ಪ್ರಕರಣ ದಾಖಲಿಸಿದರು.

ಜೈಲ್ ಒಳಗಡೆ ಕೈದಿಗಳಿಗೆ ಸಿಗಬೇಕಾಗಿದ್ದ ಸರಿಯಾದ ಊಟ, ಚಿಕಿತ್ಸಾ ಸೌಲಭ್ಯ, ಸ್ನಾನಕ್ಕೆ, ಬಟ್ಟೆ ಒಗೆಯಲು ಬೇಕಾದ ನೀರಿನ ಸೌಕರ್ಯ..... ಇವೆಲ್ಲ ಸರಿಯಾಗಿ ನೀಡುತ್ತಿಲ್ಲ. ಅರ್ಥಾತ್ ನರಕದಂತಹ ದೃಶ್ಯವಿದೆ.
ಠಾಣೆ ಜೈಲ್‌ನ (ಅಮಾನತುಗೊಂಡ) ಜೈಲರ್ ಹರಿಲಾಲ್ ಜಾಧವ್ ಹೇಳುವಂತೆ ‘‘ಭೈಖಲಾ ಸಹಿತ ಮಹಾರಾಷ್ಟ್ರದಲ್ಲಿ ಕೇವಲ ಮಹಿಳೆಯರಿಗಾಗಿರುವಂತಹ ಜೈಲುಗಳಿಲ್ಲ. ಅಲ್ಲಿ ಜೈಲರ್‌ಗಳಿಂದ ಹಿಡಿದು ಗಾರ್ಡ್ಸ್ ತನಕ ಪುರುಷರೇ ಇದ್ದಾರೆ. ಹೀಗಾಗಿ ಮಹಿಳಾ ಕೈದಿಗಳಿಗೆ ಏನಾದರೂ ಅಗತ್ಯ ಇದ್ದರೆ ಸುಪರೆಂಟೆಂಡೆಂಟ್ ಅಥವಾ ಡಾಕ್ಟರ್‌ಗಳ ಬಳಿ ತೆರಳಲು ತೊಂದರೆಗಳು ಎದುರಾಗುತ್ತವೆ. ಮಹಿಳಾ ವಿಂಗ್‌ನಿಂದ ಹೊರಗಡೆ ತೆರಳಲೂ ಜ್ಯೂನಿಯರ್ ಜೈಲ್ ಸಿಬ್ಬಂದಿಯ ಜೊತೆ ಜಗಳ ಮಾಡುವ ಸ್ಥಿತಿ ಇದೆ.

2002ರ ತನಕ ಭೈಖಲಾ ಜೈಲ್ ಕೇವಲ ಪುರುಷರಿಗಾಗಿ ಮಾತ್ರ ಇತ್ತು. ಆನಂತರ ಕೈದಿಗಳ ಸಂಖ್ಯೆ ಹೆಚ್ಚಿದ್ದರಿಂದ ಪ್ರತ್ಯೇಕ ಬ್ಯಾರಕ್ ನಿರ್ಮಿಸಬೇಕಾಯಿತು. ಇಲ್ಲೀಗ 250 ಮಹಿಳಾ ಕೈದಿಗಳಿದ್ದಾರೆ. ಆದರೆ ಸ್ಥಳಾವಕಾಶ ಇರುವುದು ಕೇವಲ 150 ಕೈದಿಗಳಿಗಾಗಿ ಮಾತ್ರ. ಅರ್ಥಾತ್ ಓವರ್ ಲೋಡಿಂಗ್ ಇದೆ.

ಮಹಾರಾಷ್ಟ್ರ ರಾಜ್ಯದ ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಕೈದಿಗಳನ್ನು ಇರಿಸಲಾಗಿದೆ. ರಾಜ್ಯದ ಒಂಬತ್ತು ಜೈಲುಗಳಲ್ಲಿ 14,841 ಕೈದಿಗಳನ್ನು ಇರಿಸುವ ಸಾಮರ್ಥ್ಯವಿದೆ. ಆದರೆ ಸದ್ಯ ಈ ಜೈಲುಗಳಲ್ಲಿ 22,065 ಕೈದಿಗಳನ್ನು ಇರಿಸಲಾಗಿದೆ.

ಮುಂಬೈ ಪಕ್ಕದ ಕಲ್ಯಾಣ್ ಜೈಲ್‌ನಲ್ಲಿ 150 ಕೈದಿಗಳನ್ನು ಇರಿಸಬಹುದಾಗಿದ್ದರೆ ಅಲ್ಲಿ ಸಾವಿರಕ್ಕೂ ಹೆಚ್ಚಿನ ಕೈದಿಗಳನ್ನು ಇರಿಸಲಾಗಿದೆ.
ಮಹಿಳಾ ಕೈದಿಗಳು ಹೇಳುವುದನ್ನು ನಂಬುವುದಾದರೆ ಈ ಜೈಲುಗಳ ಗಾರ್ಡ್ಸ್ ಖುಷಿ ಬಂದಂತೆ ಕೈದಿಗಳನ್ನು ಥಳಿಸುತ್ತಾರೆ. ಈ ಗಾರ್ಡ್ಸ್‌ಗಳು ಜೈಲ್‌ನಲ್ಲಿ ತಮ್ಮ ಹಿಡಿತ ಸಾಧಿಸಲು ನೋಡುತ್ತಿದ್ದಾರೆ.

ಠಾಣೆಯ (ಅಮಾನತುಗೊಂಡ) ಜೈಲರ್ ಹೇಳುತ್ತಾರೆ: ‘‘ಮಹಿಳಾ ಗಾರ್ಡ್ಸ್ ಕೈದಿಗಳಲ್ಲೇ ಪ್ರತೀ ಬ್ಯಾರಕ್‌ಗಾಗಿ ಮೂವರು ಮಾನಿಟರ್‌ಗಳನ್ನು ನಿಯುಕ್ತಿ ಮಾಡುತ್ತಾರೆ ಹಾಗೂ ತಮ್ಮ ಚಿಕ್ಕ ಪುಟ್ಟ ಕೆಲಸಗಳನ್ನು ಕೈದಿಗಳಿಂದಲೇ ಮಾಡಿಸುತ್ತಾರೆ. ಈ ಮಾನಿಟರ್ ಗಾರ್ಡ್‌ನ ಸೂಚನೆ ಪ್ರಕಾರ ಕೆಲಸ ಮಾಡುತ್ತಾರೆ.’’ ಆದರೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಜೈಲ್) ಭೂಷಣ್ ಕುಮಾರ್ ಉಪಾಧ್ಯಾಯ ಹೇಳುತ್ತಾರೆ: ‘‘ಕೈದಿಗಳು ತಮ್ಮ ಮೇಲೆ ಹಲ್ಲೆ ನಡೆಸಿದಾಗ ಮಾತ್ರ ಜೈಲ್ ಗಾರ್ಡ್‌ಗಳು ಕೈದಿಗಳ ಜೊತೆ ಮಾರಾಮಾರಿ ನಡೆಸುತ್ತಾರೆ. ಜೈಲ್‌ನಲ್ಲಿ ಸಿಸಿಟಿವಿ ಕ್ಯಾಮರಾ ಕೂಡಾ ಅಳವಡಿಸಲಾಗಿದೆ.’’

ಆದರೆ ಗಾರ್ಡ್‌ಗಳು ಕೈದಿಗಳನ್ನು ಸಿಸಿಟಿವಿ ಕ್ಯಾಮರಾ ಇಲ್ಲದ ಜಾಗಕ್ಕೆ ಒಯ್ದು ಥಳಿಸುತ್ತಾರೆ ಎಂದು ಕೈದಿಗಳು ಹೇಳುತ್ತಾರೆ.

ಜೈಲುಗಳಲ್ಲಿ ನೀಡಲಾದ ಸೌಲಭ್ಯಗಳು ಮತ್ತು ಜೈಲ್ ಸಿಬ್ಬಂದಿಯ ವ್ಯವಹಾರಗಳನ್ನು ತಿಳಿದುಕೊಳ್ಳಲು ಜೈಲ್ ಸುಪರಿಂಟೆಂಡೆಂಟ್, ಜೈಲರ್, ವಕೀಲ, ಎನ್‌ಜಿಒ, ನ್ಯಾಯಾಧೀಶ, ಮನಶಾಸ್ತ್ರಜ್ಞರು, ಡಾಕ್ಟರ್‌ಗಳು ಸಮಯ ಸಮಯಕ್ಕೆ ಭೇಟಿ ನೀಡುತ್ತಿದ್ದರೂ ಗಾರ್ಡ್‌ಗಳ ಹೆದರಿಕೆಯಿಂದಾಗಿ ಕೈದಿಗಳು ಅವರೆದುರು ಬಾಯಿ ಬಿಡುತ್ತಿಲ್ಲ. ಯಾಕೆಂದರೆ ದೂರು ನೀಡಿದರೆ ಆನಂತರ ಆ ಗಾರ್ಡ್ ಮತ್ತೆ ದೌರ್ಜನ್ಯ ನಡೆಸುತ್ತಾನೆ. ಮಹಿಳಾ ಕೈದಿಗಳ ಜೊತೆ ಮಾರಾಮಾರಿ ಅಲ್ಲದೆ ಅವಶ್ಯಕ ವಸ್ತುಗಳಾದ ಸೆನಿಟ್ರಿ ನ್ಯಾಪ್‌ಕಿನ್, ಸಾಬೂನು, ನೀರು....ಇತ್ಯಾದಿಗಳನ್ನೂ ಸರಿಯಾಗಿ ಒದಗಿಸುವುದಿಲ್ಲ. ಊಟ ಕೂಡಾ ಚೆನ್ನಾಗಿರುವುದಿಲ್ಲ. ಅಧಿಕಾಂಶ ಕೈದಿಗಳ ಆರೋಗ್ಯವೂ ಚೆನ್ನಾಗಿರುವುದಿಲ್ಲ. ಸರಿಯಾದ ಔಷಧಿಯೂ ನೀಡುತ್ತಿಲ್ಲ. ‘ಹಾಗಿದ್ದರೂ ಯಾರ ಬಳಿ ಹಣ ಇದೆಯೋ ಅಂತಹ ಮಹಿಳಾ ಕೈದಿಗಳಿಗೆ ಸೌಲಭ್ಯಗಳು ಸಿಗುತ್ತವೆ. ಜೈಲ್ ಸ್ಟಾಫ್, ಜೈಲರ್ - ಸುಪರೆಂಟೆಂಡೆಂಟ್, ಗಾರ್ಡ್ ಎಲ್ಲರ ಜೊತೆ ಉತ್ತಮ ಸಂಬಂಧ ಇರುತ್ತದೆ!)

ಮುಂಬೈಯ ಅರ್ಥರ್ ರೋಡ್ ಜೈಲ್‌ನಲ್ಲಿ ಕೈದಿಗಳ ಸಾಮರ್ಥ್ಯ 804 ಇದ್ದರೆ ಅಲ್ಲಿ 2,787 ಕೈದಿಗಳಿದ್ದಾರೆ. ಥಾಣೆ ಜೈಲ್‌ನಲ್ಲಿ 1,105 ಕೈದಿಗಳ ಸಾಮರ್ಥ್ಯ ಇದ್ದರೆ ಅಲ್ಲಿ 3,102 ಕೈದಿಗಳಿದ್ದಾರೆ. ರಾಜ್ಯದ ಒಂಬತ್ತು ಜೈಲುಗಳಲ್ಲಿ 29,978 ಪುರುಷ ಕೈದಿಗಳಿದ್ದಾರೆ ಹಾಗೂ 1,430 ಮಹಿಳಾ ಕೈದಿಗಳಿದ್ದಾರೆ. ಇವರಲ್ಲಿ 8,623 ಕೈದಿಗಳು ದೋಷಿಗಳೆಂದು ತೀರ್ಪು ಬಂದಿದೆ. 22,676 ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕೈದಿ ಮಂಜುಳಾ ಶೇಟ್ಯೆ ಸಾವಿನ ನಂತರ ಜೈಲ್‌ನಲ್ಲಿ ಬಂಧಿಯಾಗಿದ್ದ ಕೈದಿಗಳ ವಿಷಯವಾಗಿ ಹೈಕೋರ್ಟ್, ಗಂಭೀರ ಅಪರಾಧಗಳಲ್ಲಿ ಸೇರದ ಆ ಕೈದಿಗಳನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸುವ ಪ್ರಸ್ತಾವವನ್ನು ರಾಜ್ಯ ಸರಕಾರ ತಯಾರಿಸಿ ನೀಡುವಂತೆ ಆದೇಶ ನೀಡಿದೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ.

ಇದೇ ಸಮಯ ಸಜೆಯ ಮತ್ತು ವಿಚಾರಣಾಧೀನ ಕೈದಿಗಳ ವೀಡಿಯೊ ಕಾನ್ಫರೆನ್ಸ್ ನಡೆಸಿ ಕೋರ್ಟ್‌ನ ಕೆಲಸ ಮಾಡುವಲ್ಲಿ ನಿರ್ಲಕ್ಷ್ಯ ಯಾಕೆ ಎಂದು ಸರಕಾರವನ್ನು ಹೈಕೋರ್ಟ್ ತರಾಟೆಗೆ ಎಳೆದಿದೆ.

‘‘ಮುಂಬೈಯ ಎಲ್ಲಾ ನ್ಯಾಯಾಲಯಗಳಲ್ಲಿ ಮತ್ತು ಜೈಲುಗಳಲ್ಲಿ ಕ್ಯಾಮರಾ ಅಳವಡಿಸುವುದಷ್ಟೇ ಜವಾಬ್ದಾರಿ ಅಲ್ಲ, ಅದು ಸರಿಯಾಗಿ ಕೆಲಸ ಮಾಡುತ್ತಿದೆಯೋ ಎನ್ನುವ ಬಗ್ಗೆಯೂ ಸರಕಾರ ಗಮನ ಹರಿಸಬೇಕು’’ ಎಂದೂ ಹೈಕೋರ್ಟ್ ಎಚ್ಚರಿಸಿದೆ.

ಆರ್ಮ್ಸ್ ಕೇಸ್‌ನ ಓರ್ವ ಆರೋಪಿ ಶೇಖ್ ಅಬ್ದುಲ್ ನಈಮ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್. ಎಂ. ಸಾವಂತ್ ಮತ್ತು ನ್ಯಾ. ಸಾಧನಾ ಜಾಧವ್ ಆವರು ಸರಕಾರಕ್ಕೆ ಆದೇಶ ನೀಡುತ್ತಾ ಅಕ್ಟೋಬರ್ ಒಳಗೆ ಮಹಾರಾಷ್ಟ್ರದ ಪ್ರತೀ ಕೋರ್ಟ್ ನಲ್ಲಿ ವೀಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯ ಒದಗಿಸುವಂತೆ ಸೂಚಿಸಿದ್ದಾರೆ. ಡಿಸೆಂಬರ್ 2016ರಲ್ಲಿ ಕೋರ್ಟ್ ಮಾರ್ಚ್ 2017ರೊಳಗೆ ಈ ಕೆಲಸ ಮಾಡುವಂತೆ ಹೇಳಿತ್ತು. ಆದರೆ, ಸರಕಾರ ಈ ವರ್ಷದ ಫೆಬ್ರವರಿಯಲ್ಲಿ ಅಕ್ಟೋಬರ್ 2017ರ ತನಕ ಸಮಯವನ್ನು ಬೇಡಿತ್ತು.

ಕೋರ್ಟ್ ಅದಕ್ಕೆ ಒಪ್ಪಿಗೆ ನೀಡಿತ್ತು. ಮಹಿಳಾ ಕೈದಿಗಳಲ್ಲಿ ಶಶಿಕಲಾ ಪಾಟಣ್ಕರ್ (ಡ್ರಗ್ಸ್ ಕಳ್ಳಸಾಗಣೆ ಆರೋಪ), ಜಯಾ ಛೆಡಾ (ಮಟ್ಕಾ ಕಿಂಗ್ ಪತಿ ಸುರೇಶ್ ಭಗತ್ ಹತ್ಯಾ ಆರೋಪ), ಇಂದ್ರಾಣಿ ಮುಖರ್ಜಿ (ಮಗಳು ಶೀನಾ ವೋರಾ ಹತ್ಯಾ ಆರೋಪ) ಸುಷಣಾ ಹೇಮಂತ್ ರಾಮ್‌ಟೆಕ್ (ನಕ್ಸಲೀಯರ ಜೊತೆಗಿನ ಸಂಬಂಧದ ಆರೋಪ), ಸಾಧ್ವಿ ಪ್ರಜ್ಞಾ ಠಾಕೂರ್....(ಸ್ಫೋಟ ಆರೋಪ....) ಇವರೆಲ್ಲರೂ ಆಗಾಗ ಒಂದಲ್ಲ ಒಂದು ಆರೋಪಗಳನ್ನು ಜೈಲ್ ಸಿಬ್ಬಂದಿಯ ಮೇಲೆ ಮಾಡಿರುತ್ತಾರೆ.

‘‘ಮಹಾರಾಷ್ಟ್ರದಲ್ಲಿ ಮಹಿಳಾ ಜೈಲುಗಳ ಸ್ಥಿತಿ ಕೆಟ್ಟಿಲ್ಲ’’ ಎನ್ನುತ್ತಾರೆ ಜೈಲ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭೂಷಣ್ ಕುಮಾರ್ ಉಪಾಧ್ಯಾಯ.
ಆದರೆ ‘‘ಈ ಮಹಿಳಾ ಕೈದಿಯ ಸಾವು ನಮ್ಮ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ ಎನ್ನುವುದನ್ನು ತಿಳಿಸುತ್ತದೆ’’ ಎಂದು ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್‌ನ ನಿರ್ದೇಶಕ ಸಂಜಯ್ ಹಜಾರಿಕಾ ಹೇಳುತ್ತಾರೆ
ಇವೆಲ್ಲವನ್ನೂ ಗಮನಿಸಿ ಬಾಂಬೆ ಹೈಕೋರ್ಟ್ ಜೈಲ್ ಸುಧಾರ್ ಸಮಿತಿ ರಚನೆಗೆ ಆದೇಶ ನೀಡಿದೆ. ಈ ಸಮಿತಿಯ ರಚನೆಯೂ ಆಗಿದೆ. ಆದರೆ ಈ ತನಕ ಇದರ ಒಂದೂ ಸಭೆಯೂ ನಡೆದಿಲ್ಲ.


ಜೈಲುಗಳಲ್ಲಿ ಕೈದಿಗಳಿಗೆ ಆವಶ್ಯಕ ಸೌಲಭ್ಯ ಒದಗಿಸಬೇಕು. ಮಹಿಳೆಯರಿಗಾಗಿ ಪ್ರತ್ಯೇಕ ಬಾತ್‌ರೂಮ್ ನಿರ್ಮಿಸ ಬೇಕೆಂದು ಕೋರ್ಟ್ ಎಲ್ಲಾ ಜೈಲುಗಳ ಸುಪರೆಟೆಂಡೆಂಟ್‌ಗಳಿಗೆ ಹೇಳಿದೆ. ಇದುವರೆಗೆ ಜೈಲುಗಳಲ್ಲಿ 538 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ ಇದರಲ್ಲಿ ಕೇವಲ 63 ಮಾತ್ರ ಕೆಲಸ ಮಾಡುತ್ತಿದೆ. ಯಾಕೆ ಹೀಗೆ? ಎಂದು ಬಾಂಬೆ ಹೈಕೋರ್ಟ್ ಸರಕಾರಕ್ಕೆ ಪ್ರಶ್ನಿಸಿದೆ. ಕ್ಯಾಮರಾಗಳನ್ನು ಅಳವಡಿಸುವ ಜೊತೆಗೆ ಅದು ಸರಿಯಾಗಿ ಕೆಲಸ ಮಾಡುವಂತೆಯೂ ನೋಡಿಕೊಳ್ಳುವುದು ಸರಕಾರದ ಕೆಲಸ ಎಂದಿದೆ ಕೋರ್ಟ್. ಈಗ ಜೈಲುಗಳಲ್ಲಿ ಕೈದಿಗಳ ಸ್ಥಿತಿಯ ಕುರಿತಾಗಿ ಪರ-ವಿರೋಧ ಹೇಳಿಕೆಗಳು ಪ್ರತೀ ದಿನ ಬರುತ್ತಲೇ ಇದ್ದು, ಈ ಬಗ್ಗೆ ತನಿಖೆ ಆರಂಭವಾಗಿದೆ. ಮಹಿಳಾ ಕೈದಿಯ ಸಾವಿನ ರಹಸ್ಯ ಬಯಲಾಗಬೇಕಿದೆ.
* * *
 
ಜೈಲುಗಳಲ್ಲಿ ಮಹಿಳಾ ಕೈದಿಗಳಿಗೆ ಹೆಲ್ಪ್‌ಲೈನ್ ಸೆಂಟರ್
ಮಂಜುಳಾ ಶೇಟ್ಯೆಯ ಸಾವು, ಮಹಿಳಾ ಕೈದಿಗಳ ವಿರೋಧ ಪ್ರದರ್ಶನ ಮತ್ತು ಜೈಲರ್- ಜೈಲ್ ಸಿಬ್ಬಂದಿ ವಿರುದ್ಧದ ದೂರಿನ ಘಟನೆಗಳನ್ನು ಮುಂದಿಟ್ಟು ಮಹಾರಾಷ್ಟ್ರ ಮಹಿಳಾ ಆಯೋಗವು ರಾಜ್ಯದಾದ್ಯಂತ ಜೈಲುಗಳಲ್ಲಿ ವಿಶೇಷ ಹೆಲ್ಪ್‌ಲೈನ್ ಸೆಂಟರ್ ಸೌಲಭ್ಯ ಆರಂಭಿಸಲು ಸೂಚಿಸಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಾಹಟ್ಕರ್ ಅವರು ಪತ್ರಕರ್ತರಿಗೆ ತಿಳಿಸಿದಂತೆ ಈ ಸೌಲಭ್ಯ ಭೈಖಲಾ ಜೈಲ್‌ನಿಂದ ಆರಂಭವಾ ಗಲಿದ್ದು, ಶೀಘ್ರವೇ ಎಲ್ಲಾ ಜೈಲುಗಳಲ್ಲಿ ಈ ಸೇವೆ ಆರಂಭವಾಗಲಿದೆ.
ಹೆಲ್ಪ್‌ಲೈನ್ ಸೆಂಟರ್‌ಗಳಲ್ಲಿ ಮಹಿಳಾ ಕೈದಿಗಳ ಸಮಸ್ಯೆಗಳನ್ನು ಆಲಿಸಿ, ಪರಿಹಾರ ನೀಡುವುದರ ಜೊತೆಗೆ ಈ ಮಹಿಳಾ ಕೈದಿಗಳ ಕೌನ್ಸಿಲಿಂಗ್ ಕೂಡಾ ನಡೆಸಲಾಗುವುದು. ಇಷ್ಟೇ ಅಲ್ಲ, ಕೈದಿಗಳ ಸಂಬಂಧಿಕರೂ ಕೂಡಾ ಈ ಹೆಲ್ಪ್‌ಲೈನ್ ನಂಬರ್, ಟೆಲಿಫೋನ್ ನಂಬರ್, ಇ-ಮೇಲ್, ವಾಟ್ಸ್ ಆ್ಯಪ್ ನಂಬರ್, ಮತ್ತು ಕೌನ್ಸಿಲಿಂಗ್ ನಂಬರ್‌ಗಳ ಮೂಲಕ ಸಹಾಯ ಪಡೆಯಬಹುದಾಗಿದೆ.
ಮುಂದಿನ ಎರಡು ವಾರಗಳಲ್ಲಿ ಹೆಲ್ಪ್‌ಲೈನ್ ನಂಬರ್ ಜಾರಿಗೆ ಬರಲಿದೆ. ಸದ್ಯ ಆಯೋಗದ ಹೆಲ್ಪ್‌ಲೈನ್ ನಂಬರ್ 022-26590878 ಮತ್ತು 022-26590474ರ ಸಹಾಯ ಪಡೆಯಬಹುದಾಗಿದೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News

ಸಂವಿಧಾನ -75