ನಿಮ್ಮ ಮೂತ್ರಪಿಂಡಗಳಿಗೆ ಹಾನಿಯನ್ನು ಮಾಡುವ ಈ ಐದು ವಿಷಯಗಳ ಬಗ್ಗೆ ಗೊತ್ತೇ?
ಮೂತ್ರಪಿಂಡಗಳು ಅತ್ಯಂತ ಹೆಚ್ಚಿನ ಕಾಳಜಿ ಮತ್ತು ಗಮನವನ್ನು ವಹಿಸಬೇಕಾದ ನಮ್ಮ ದೇಹದ ಪ್ರಮುಖ ಅಂಗಾಂಗವಾಗಿವೆ. ನಮ್ಮ ದೇಹದಲ್ಲಿಯ ತ್ಯಾಜ್ಯವನ್ನು ಮೂತ್ರದ ರೂಪದಲ್ಲಿ ಹೊರಹಾಕುವ ಪ್ರಮುಖ ಕಾರ್ಯವನ್ನು ಅವು ನಿರ್ವಹಿಸುತ್ತವೆ.
ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ, ಅತಿಯಾದ ದಣಿವು, ಚರ್ಮದ ಒಣಗುವಿಕೆ ಮತ್ತು ಕೆರಳುವಿಕೆ, ಕೆಟ್ಟ ಉಸಿರು, ತಲೆ ಸುತ್ತುವಿಕೆ ಇತ್ಯಾದಿಗಳು ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದರ ಲಕ್ಷಣಗಳಾಗಿವೆ. ಮೂತ್ರಪಿಂಡಗಳ ಸ್ಥಿತಿಯ ಬಗ್ಗೆ ಅರಿವು ಮತ್ತು ಅವುಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವುದು ಮುಖ್ಯವಾಗಿದೆ. ನಮ್ಮ ಕೆಲವು ಅಭ್ಯಾಸಗಳು ನಮಗರಿವಿಲ್ಲದೆ ಮೂತ್ರಪಿಂಡಗಳಿಗೆ ಹಾನಿಯನ್ನು ಮಾಡಬಹುದು.
ಅತಿಯಾದ ಸೋಡಿಯಂ ಸೇವನೆ
ಅತಿಯಾದ ಸೋಡಿಯಂ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುವ ಜೊತೆಗೆ ಮೂತ್ರಪಿಂಡಕ್ಕೆ ಹಾನಿಯನ್ನುಂಟು ಮಾಡಬಹುದು. ಆಹಾರದಲ್ಲಿ ಹೆಚ್ಚಿನ ಸೋಡಿಯಂ ಮೂತ್ರಕಲ್ಲುಗಳನ್ನು ಸೃಷ್ಟಿಸುತ್ತದೆ ಮತ್ತು ಇದು ಹೊಟ್ಟೆನೋವು, ಮೂತ್ರವಿಸರ್ಜನೆಯಲ್ಲಿ ತೊಂದರೆ ಮತ್ತು ತಲೆ ಸುತ್ತುವಿಕೆಗೆ ಕಾರಣವಾಗುತ್ತದೆ.
ನೋವು ನಿವಾರಕಗಳ ಸುದೀರ್ಘ ಬಳಕೆ
ಸ್ಟಿರಾಯ್ಡಿ ರಹಿತ ನೋವು ನಿವಾರಕ ಮಾತ್ರೆಗಳ ಸುದೀರ್ಘ ಅವಧಿಯ ಬಳಕೆ ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಅದು ಮೂತ್ರಪಿಂಡದ ಸಂಪೂರ್ಣ ವೈಫಲ್ಯಕ್ಕೂ ಕಾರಣವಾಗಬಹುದು.
ಅತಿಯಾದ ಮಾಂಸಾಹಾರ ಸೇವನೆ
ದಿನವೂ ಮಾಂಸ ಸೇವನೆ ಮೂತ್ರಪಿಂಡಗಳಿಗೆ ಹಾನಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾಂಸದಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಅದು ನಮ್ಮ ದೇಹದಲ್ಲಿ ಅತಿಯಾದ ಪ್ರಮಾಣದಲ್ಲಿ ಆಮ್ಲದ ಉತ್ಪತ್ತಿಗೆ ಕಾರಣವಾಗುತ್ತದೆ. ಇದು ಆ್ಯಸಿಡೊಸಿಸ್ ಅನ್ನು ಉಂಟು ಮಾಡುತ್ತದೆ, ಅಂದರೆ ಮಾಮೂಲಿ ಕಾರ್ಯವಿಧಾನದಲ್ಲಿ ಆಮ್ಲವನ್ನು ಸಂಸ್ಕರಿಸಲು ಮೂತ್ರಪಿಂಡಗಳಿಗಳಿಗೆ ಸಾಧ್ಯವಾಗುವುದಿಲ್ಲ.
ಸೋಡಾ
ಆಹಾರದಲ್ಲಿ ತಿನ್ನುವ ಸೋಡಾದ ಅತಿಯಾದ ಬಳಕೆ ಮತ್ತು ಮೂತ್ರಪಿಂಡ ಸಮಸ್ಯೆಗಳಿಗೆ ನೇರ ಸಂಬಂಧವಿರುವುದನ್ನು ಅಧ್ಯಯನಗಳು ಪತ್ತೆ ಹಚ್ಚಿವೆ. ಪ್ರತಿನಿತ್ಯ ಎರಡಕ್ಕಿಂತ ಹೆಚ್ಚು ಸೋಡಾ ಪಾನೀಯ ಸೇವಿಸುವವರಲ್ಲಿ ಮೂತ್ರಪಿಂಡ ಕಾಯಿಲೆಗೆ ತುತ್ತಾಗುವ ಅಪಾಯ ಇತರರಿಗಿಂತ ಶೇ.30ರಷ್ಟು ಹೆಚ್ಚಿರುತ್ತದೆ.
ಸಾಕಷ್ಟು ನೀರು ಕುಡಿಯದಿರುವಿಕೆ
ಪ್ರತಿದಿನ ಸಾಕಷ್ಟು ನೀರು ಕುಡಿಯದಿದ್ದರೆ ಅದು ತೀವ್ರ ಮೂತ್ರಪಿಂಡ ಸಮಸ್ಯೆಗೆ ಕಾರಣವಾಗಬಹುದು. ಸಾಕಷ್ಟು ನೀರು ಕುಡಿಯುವುರಿಂದ ಮೂತ್ರಪಿಂಡಗಳು ತಮ್ಮ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ದೇಹದಲ್ಲಿನ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಾಯಕವಾಗುತ್ತದೆ.