ಸಾಹಿತಿಗಳಿಗೂ ಗನ್‌ಮ್ಯಾನ್ ರಕ್ಷಣೆ; ನಾ.ಡಿಸೋಜ ಆತಂಕ
ಮಣಿಪಾಲ, ಸೆ.15: ಹಿರಿಯ ಪತ್ರಕರ್ತೆ ಹಾಗೂ ಪ್ರಗತಿಪರ ಲೇಖಕಿ ಗೌರಿ ಲಂಕೇಶ ಅವರ ಹತ್ಯೆಯ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಮುಖ ಸಾಹಿತಿಗಳಿಗೆ ರಾಜ್ಯ ಸರಕಾರ ಭದ್ರತೆಗಾಗಿ ಗನ್‌ಮ್ಯಾನ್‌ಗಳನ್ನು ನೀಡುವ ಸ್ಥಿತಿ ನಿರ್ಮಾಣ ವಾಗಿರುವುದಕ್ಕೆ ಕನ್ನಡದ ಹಿರಿಯ ಸಾಹಿತಿ, ಕಾದಂಬರಿಕಾರ, ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ನಾರ್ಬಟ್ ಡಿಸೋಜ (ನಾ.ಡಿಸೋಜ) ತೀವ್ರವಾದ ಆತಂಕ ವ್ಯಕ್ತಪಡಿಸಿದ್ದಾರೆ.
ಮಣಿಪಾಲ ವಿವಿ ವತಿಯಿಂದ ನಡೆದಿರುವ ಮಣಿಪಾಲ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಪತ್ನಿಯೊಂದಿಗೆ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಔಪಚಾರಿಕವಾಗಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಒಂದು ದೊಡ್ಡ ದುರಂತ. ನಮಗೆ ಅನಿಸಿದ್ದನ್ನು ನೇರವಾಗಿ ಬರೆಯುವ ಸ್ವಾತಂತ್ರ ಇಲ್ಲದೇ ಹೋದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಮುಂದಿನ ದಿನಗಳಲ್ಲಿ ನನ್ನ ಬರವಣಿಗೆಯೂ ಒಂದು ವರ್ಗಕ್ಕೆ ಸಿಟ್ಟು ತರಬಹುದು ಎಂದು ನಾ.ಡಿಸೋಜ ಆತಂಕ ವ್ಯಕ್ತಪಡಿಸಿ ದರು.
ಗನ್‌ಮ್ಯಾನ್ ಬೇಡ: ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ ನಾಡಿನ ಹಲವು ಸಾಹಿತಿಗಳಿಗೆ ರಾಜ್ಯ ಸರಕಾರ ಗನ್‌ಮ್ಯಾನ್‌ಗಳನ್ನು ನೀಡುತ್ತಿದೆ.ನನ್ನ ಜತೆಗೆ ಪತ್ನಿ ಇರುವಾಗ ಗನ್‌ಮ್ಯಾನ್ ಯಾಕೆ? ಎಂದು ತುಂಟತನದಿಂದ ಪ್ರಶ್ನಿಸಿದ ಅವರು, ಈ ರೀತಿ ಗನ್ ಸಂಸ್ಕೃತಿ ಸಾಹಿತ್ಯ ವಲಯದಲ್ಲಿ ಆತಂಕ ಸೃಷ್ಟಿಸಿದೆ. ನನಗೆ ಗನ್‌ಮ್ಯಾನ್ ಕೊಟ್ಟರೂ ಬೇಡ. ಪತ್ನಿಯೇ ನನ್ನೊಂದಿಗೆ ಇರುತ್ತಾರೆ ಎಂದಾಗ ಪಕ್ಕದಲ್ಲಿಯೇ ಕುಳಿತಿದ್ದ ಪತ್ನಿ ಫಿಲೋಮಿನಾ ನಕ್ಕರು.
ಸಾಹಿತ್ಯ ಯಾವತ್ತೂ ಕೆಟ್ಟಿಲ್ಲ, ಕೆಡುವುದೂ ಇಲ್ಲ. ಆದರೆ ಅದನ್ನು ವಿಶ್ಲೇಷಿಸುವ ವಿಶ್ಲೇಷಕರು, ಓದುಗರು ಕೆಟ್ಟದಾಗಿ ಸ್ವೀಕರಿಸುತ್ತಿದ್ದಾರೆ. ಅವರ ಮನಸ್ಸಿಗೆ ಬಂದಂತೆ ಹೇಳುತಿತಿದ್ದಾರೆ. ಇದು ಸಾಹಿತ್ಯದ ಬೆಳವಣಿಗೆಗೆ ಮಾರಕ ಎಂದು ಡಿಸೋಜ ತಿಳಿಸಿದರು.
‘ಶಿವಪ್ಪ ನಾಯಕ’ ಮುಂದಿನ ಕೃತಿ: ಕೆಳದಿ, ಇಕ್ಕೇರಿ, ಬಿದನೂರು ಸಾಮ್ರಾಜ್ಯವನ್ನಾಳಿದ ‘ಶಿಸ್ತಿನ ಶಿವಪ್ಪ ನಾಯಕ’ ಎನ್ನುವ ಕೃತಿಯನ್ನು ಬರೆಯುತ್ತಿದ್ದು, ಆತ ಕೃಷಿೂಮಿಯಲ್ಲಿ ಬೆಳೆದ ಫಸಲನ್ನು ನೋಡಿ ತೆರಿಗೆ ವಿಧಿಸುತಿದ್ದ. 1700ರ ಸುಮಾರಿಗೆ ಕರಾವಳಿ ತೀರದ ಗಂಗೊಳ್ಳಿ, ಮಂಗಳೂರು, ಟ್ಕಳ, ಹೊನ್ನಾವರದಲ್ಲಿದ್ದ ಪೋರ್ಚುಗೀಸರ 8 ಕೋಟೆಗಳನ್ನು ಶಿವಪ್ಪ ನಾಯಕ ಧ್ವಂಸಗೊಳಿಸಿದ್ದ. ಆತನ ಕುರಿತ ವಿಸ್ತೃತವಾಗಿ ಬರೆಯುತ್ತಿದ್ದೇನೆ. ಸದ್ಯದಲ್ಲಿಯೇ ಅದು ಬಿಡುಗಡೆಯಾಗುವುದು ಎಂದು ನಾ. ಡಿಸೋಜ ಹೇಳಿದರು.
ಸಾಗರದಲ್ಲಿ 1937ರ ಜೂನ್‌ನಲ್ಲಿ ಜನಿಸಿದ ನಾ ಡಿಸೋಜ, 37 ವರ್ಷಗಳ ಕಾಲ ಸರಕಾರಿ ಉದ್ಯೋಗಿಯಾಗಿದ್ದರು. ಅವರು 40ಕ್ಕೂ ಅಧಿಕ ಕಾದಂಬರಿ, ಸಣ್ಣ ಕತೆ, ನಾಟಕ, ಮಕ್ಕಳ ಸಾಹಿತ್ಯಗಳನ್ನು ರಚಿಸಿರುವ ನಾಡಿಸೋಜ ತನ್ನ ಮಕ್ಕಳ ಕಾದಂಬರಿ ‘ಮುಳುಗಡೆಯ ಊರಿಗೆ ಬಂದವರು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ ಪಡೆದಿದ್ದಾರೆ. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ‘ದ್ವೀಪ’, ‘ಮುಳುಗಡೆ’, ‘ಕಾಡಿನ ಬೆಂಕಿ’ ಅವರ ಪ್ರಸಿದ್ಧ ಕನ್ನಡ ಕಾದಂಬರಿಗಳು.