ಅಂಬೇಡ್ಕರ್ ಸ್ಮಾರಕ: ಆರಂಭವಾಗದಿದ್ದರೂ ಏರುತ್ತಿರುವ ವೆಚ್ಚ!

Update: 2017-09-25 19:15 GMT

ಮರಾಠಿ ಶಾಲೆಗಳ ಚರ್ಚೆಯಲ್ಲಿ ಕನ್ನಡದ ಶ್ಲಾಘನೆ!
ಮರಾಠಿ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳ ಪಾಲಕರ - ಹೆತ್ತವರ ಮಹಾಸಮ್ಮೇಳನ ಮುಂಬೈಯಲ್ಲಿ ನವಂಬರ್ 25 ಮತ್ತು 26ರಂದು ನಡೆಯಲಿದೆ. ಈ ಕುರಿತು ಪೂರ್ವಭಾವಿ ಸಭೆಯೊಂದು ಮಲಾಡ್‌ನಲ್ಲಿ ಜರುಗಿತು. ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮರಾಠಿ ಮಾಧ್ಯಮದ ಮಕ್ಕಳ ಪಾಲಕರು ಉಪಸ್ಥಿತರಿದ್ದರು. ಈ ಬೈಠಕ್‌ನಲ್ಲಿ ಮುಂದಿನ ರಣನೀತಿ ನಿರ್ಧರಿಸಲಾಯಿತು.

‘‘ಮಕ್ಕಳನ್ನು ಇಂಗ್ಲಿಷ್‌ನ ಶಾಲೆಗಳಲ್ಲಿ ಸೇರಿಸಿ ಅವರಿಗೆ ಮನೆಯಲ್ಲಿ ಮರಾಠಿ ಕಲಿಸಬೇಕು ಎನ್ನುವ ವಾದ ಅರ್ಥವಿಲ್ಲದ್ದು. ಇದನ್ನು ಪಾಲಕರು ವಿರೋಧಿಸುತ್ತಾರೆ. ಯಾಕೆಂದರೆ ಮರಾಠಿ ಮಾಧ್ಯಮದ ಶಾಲೆಗಳು ಉಳಿದರೆ ಮಾತ್ರ ಮರಾಠಿ ಭಾಷೆ ಕೂಡಾ ಉಳಿಯುವುದು’’ ಎನ್ನುವ ಅಭಿಪ್ರಾಯ ಅಲ್ಲಿ ವ್ಯಕ್ತವಾಗಿತ್ತು.

ಬಂಗಾಳಿ, ಕನ್ನಡದ ಮಕ್ಕಳು ಪರಸ್ಪರ ಭೇಟಿಯಾದಾಗ ತಮ್ಮ ತಮ್ಮ ಮಾತೃಭಾಷೆಯಲ್ಲೇ ಮಾತನಾಡುತ್ತಾರೆ. ಇವರಿಗೆಲ್ಲ ತಮ್ಮ ಭಾಷೆಯ ಬಗ್ಗೆ ಮಾತನಾಡುವುದು ಹೆಮ್ಮೆ ಇದೆ. ಇವರಿಗೆ ಇದನ್ನು ಯಾರೂ ಕಲಿಸಬೇಕಿಲ್ಲ. ಆದರೆ ಮರಾಠಿ ಮಕ್ಕಳಿಗೆ ಮರಾಠಿ ಮಾತನಾಡಲು ಕಲಿಸಬೇಕಾದ ಸ್ಥಿತಿ ಬಂದಿದೆ. ಯಾಕೆಂದರೆ ನಾವು ಇಂಗ್ಲಿಷನ್ನು ತಂದೆ ತಾಯಿ ಎಂದು ನಂಬಿದ್ದೇವೆ. ಅಮೆರಿಕದ ಮೋಹ, ಅವಾಸ್ತವಿಕ ಕಲ್ಪನೆ ಇದಕ್ಕೆ ಮೊರೆ ಹೋಗಿ ಹೆಚ್ಚು ಹಣ ಖರ್ಚು ಮಾಡಿ ಕಾನ್ವೆಂಟ್ ಎಂಬ ಮಾಯಾಜಾಲದಲ್ಲಿ ಸಿಲುಕಿದ್ದೇವೆ. ಆದರೆ ನಮ್ಮ ಮರಾಠಿ ಭಾಷೆ, ಮರಾಠಿ ಸಂಸ್ಕೃತಿ ಸಾಯುತ್ತಿವೆ ಎಂದು ಈ ಬೈಠಕ್‌ನ ಚರ್ಚೆಯಲ್ಲಿ ವ್ಯಕ್ತವಾಯಿತು. ರಾಜ್ಯ ಸರಕಾರ ಮರಾಠಿ ಶಾಲೆಗಳನ್ನು ಯಾಕೆ ಮುಚ್ಚಲು ನೋಡುತ್ತಿದೆ ಮರಾಠಿ ಶಾಲೆಗಳಲ್ಲಿ ಇಂಗ್ಲಿಷ್ ಹಾಗೂ ಗಣಿತ ಮತ್ತು ವಿಜ್ಞಾನವನ್ನು ಇಂಗ್ಲಿಷ್‌ನಲ್ಲೇ ಯಾಕೆ ಕಲಿಸಬಾರದು ಎಂಬ ಸವಾಲು ಕೂಡಾ ಮುಂದಿಟ್ಟರು ಪಾಲಕರು.

ವಿಶ್ವದ ಮರಾಠಿ ಭಾಷೆಯ ಜನರು ಒಗ್ಗಟ್ಟಾಗಿ ಒಂದೇ ವೇದಿಕೆಗೆ ಬಂದು ಮರಾಠಿ ಶಾಲೆಗಳ ಪರವಾಗಿ ಎದ್ದು ನಿಲ್ಲಬೇಕು. ಮರಾಠಿಯನ್ನು ಉಳಿಸಬೇಕಾದರೆ ಮೊದಲು ಮರಾಠಿ ಶಾಲೆಗಳನ್ನು ಉಳಿಸಬೇಕಾಗಿದೆ ಎಂದು ಕುಸುಮಾಗ್ರಜ ಪ್ರತಿಷ್ಠಾನದ ಮಾಜಿ ಉಪಾಧ್ಯಕ್ಷರು ಕರೆ ನೀಡಿದರು.

* * *

ಅಂಬೇಡ್ಕರ್ ಸ್ಮಾರಕದ ಖರ್ಚಿನಲ್ಲಿ ಕೋಟಿ ರೂಪಾಯಿ ವೃದ್ಧಿ
ಭಾರತ ರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸ್ಮಾರಕದ ಭೂಮಿ ಪೂಜೆ ನಡೆದು 23 ತಿಂಗಳುಗಳು ಕಳೆದಿವೆ. ಆದರೆ ಅದರ ಒಂದೇ ಒಂದು ಇಟ್ಟಿಗೆಯನ್ನೂ ಇಡಲಾಗಲಿಲ್ಲ. ಈ ನಡುವೆ ಸ್ಮಾರಕಕ್ಕೆ ತಗಲುವ ವೆಚ್ಚದಲ್ಲಿ 166 ಕೋಟಿ ರೂಪಾಯಿಯಷ್ಟು ವೃದ್ಧಿಯಾಗಿದೆ. ಆರ್.ಟಿ.ಐ. ಮೂಲಕ ಈ ಸಂಗತಿ ಬೆಳಕಿಗೆ ಬಂದಿದೆ.

ಬಿಹಾರ ಚುನಾವಣೆಯನ್ನು ಗಮನದಲ್ಲಿರಿಸಿ ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 11, 2015ರಂದು ಇಂದೂಮಿಲ್ ಪರಿಸರದಲ್ಲಿ ಭಾರತ ರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸ್ಮಾರಕ ನಿರ್ಮಿಸುವ ನಿಟ್ಟಿನಲ್ಲಿ ಭರ್ಜರಿಯಾಗಿ ಭೂಮಿ ಪೂಜೆ ನಡೆಸಿದ್ದರು. ಆಗ ಈ ಸ್ಮಾರಕಕ್ಕೆ ಸುಮಾರು 425 ಕೋಟಿ ರೂ. ಖರ್ಚು ಬರಬಹುದು ಎನ್ನಲಾಯಿತು. ಸ್ಮಾರಕಕ್ಕೆ ಜಮೀನನ್ನು ಎಂ.ಎಂ.ಆರ್.ಡಿ.ಎ.ಯು ಸರಕಾರದಿಂದ 25 ಮಾರ್ಚ್ 2017ರಂದು ಪಡೆದಿವೆ. ಸ್ಮಾರಕದ ನಿರ್ಮಾಣಕ್ಕಾಗಿ 14 ಎಪ್ರಿಲ್ 2017 ರಂದು ಟೆಂಡರ್ ಕರೆಯಲಾಗಿತ್ತು. ಟೆಂಡರ್‌ನ ಕಾರ್ಯಾಚರಣೆ ಪೂರ್ಣಗೊಂಡ ನಂತರ ಕೆಲಸ ಆರಂಭವಾಗಲಿದೆ. ಆದರೆ ಈಗ ಅದೇ ಸ್ಮಾರಕಕ್ಕೆ ಖರ್ಚು 591 ಕೋಟಿ ರೂಪಾಯಿ ಆಗಲಿದೆಯಂತೆ. ಅಂದರೆ 166 ಕೋಟಿ ರೂ. ಹೆಚ್ಚಳವಾಗಿದೆ.

ಈ ಕೆಲಸಕ್ಕಾಗಿ ಸರಕಾರದ ಆರ್ಕಿಟೆಕ್ಟ್ ಮೆ ಶಶಿ ಪ್ರಭು ಆ್ಯಂಡ್ ಎಸೋಸಿಯೇಶನ್‌ನ್ನು ನಿಯುಕ್ತಿಗೊಳಿಸಿದೆ. ಈ ತನಕ ಇವರಿಗೆ 3.44 ಕೋಟಿ ರೂಪಾಯಿ ನೀಡಲಾಗಿದೆ. ಸ್ಮಾರಕದ ಸಂಬಂಧವಾಗಿ ಆರ್.ಟಿ.ಐ. ಕಾರ್ಯಕರ್ತ ಅನಿಲ್ ಗಲಗಲಿ ಅವರು ಮುಂಬೈ ಮಹಾನಗರ ಪ್ರದೇಶ ವಿಕಾಸ ಪ್ರಾಧಿಕರಣ (ಎಂ.ಎಂ.ಆರ್.ಡಿ.ಎ.)ದಿಂದ ಮಾಹಿತಿಯನ್ನು ಕೇಳಿದ್ದರು. ಪ್ರಧಾನಿಯವರು ಭೂಮಿಪೂಜೆ ಮಾಡುವಾಗ 425 ಕೋಟಿ ರೂ. ಖರ್ಚು ಎನ್ನಲಾಗಿದ್ದರೆ ಇದೀಗ 23 ತಿಂಗಳ ನಂತರ 591 ಕೋಟಿ ರೂ. ಖರ್ಚು ಬರುವ ಅಂದಾಜು ವ್ಯಕ್ತಪಡಿಸಲಾಗಿದೆ. ಆದರೆ ಅಂಬೇಡ್ಕರ್ ಸ್ಮಾರಕಕ್ಕಾಗಿ ಈ ತನಕ ಒಂದು ಇಟ್ಟಿಗೆಯನ್ನೂ ಕಟ್ಟಲಾಗಿಲ್ಲ. ಆದರೂ 166 ಕೋಟಿ ರೂ. ಖರ್ಚಿನ ವೃದ್ಧಿಯಾಗಿದೆ! ‘‘ಇದು ಚುನಾವಣೆಯ ದೃಷ್ಟಿಯಲ್ಲಿ ನಡೆದ ಭೂಮಿಪೂಜೆಯೇ ಆಗಿದೆ’’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

* * *

ಮಳೆ ಎದುರಿಸಲು ಗರ್ಬಾ ಆಯೋಜಕರಿಂದ ಮೈದಾನದಲ್ಲಿ ಮರದ ಪ್ಲ್ಯಾಟ್‌ಫಾರ್ಮ್
ಗಣೇಶೋತ್ಸವದ ಹತ್ತು ದಿನಗಳ ಸಂಭ್ರಮದ ನಂತರ ಇದೀಗ ದಸರಾ ಉತ್ಸವದ ಹತ್ತು ದಿನಗಳ ಸಂಭ್ರಮದಲ್ಲಿ ಮುಂಬೈ ಮುಳುಗಿದೆ. ಮುಂಬೈಯ ದಾಂಡಿಯಾ ರಾಸ್-ಗರ್ಬಾ ನೃತ್ಯಕ್ಕೆ ವಿಶೇಷ ಛಾಪು ಇದೆ. ಈ ಬಾರಿ ಪ್ರಮುಖ ಹದಿನೆಂಟು ಸಾರ್ವಜನಿಕ ನವರಾತ್ರೋತ್ಸವ ಮಂಡಳಿಗಳು ಗರ್ಬಾ ನೃತ್ಯ ಆಯೋಜಿಸಿವೆ. ಇಲ್ಲಿ ದಿನದ ಟಿಕೆಟ್ ಮತ್ತು ಸೀಸನ್ ಟಿಕೆಟ್‌ಗಳು ಪ್ರತ್ಯೇಕ ಇವೆ.

ಇದಕ್ಕಾಗಿ ಹಾಡುಗಾರರ ಆರ್ಕೆಸ್ಟ್ರಾ ತಂಡವೇ ಇದೆ. ಅದರಲ್ಲಿ ಗರ್ಬಾಕ್ವೀನ್ ಫಾಲ್ಗುಣಿ ಪಾಠಕ್ ಅವರ ತಂಡದ ಈ ಬಾರಿಯ ಸಂಭಾವನೆ ಒಂದು ಕೋಟಿ ಮೂವತ್ತು ಸಾವಿರ ರೂ.! ಈ ಬಾರಿ ಆರಂಭದಲ್ಲೇ ಮಳೆಯ ಕಿರಿಕಿರಿಯ ಕಾರಣ ಗರ್ಬಾ ಆಯೋಜಕರಲ್ಲಿ ಭಯ ಹುಟ್ಟಿಸಿತ್ತು. ಮುಂಬೈಯ ಬೊರಿವಲಿ, ಗೋರೆಗಾಂವ್, ಕಾಂದಿವಲಿ, ಥಾಣೆ, ಡೊಂಬಿವಲಿ ಇಲ್ಲೆಲ್ಲ ಪ್ರಮುಖ ದಾಂಡಿಯಾ ನೃತ್ಯ ಆಯೋಜಕರಿದ್ದು ನವರಾತ್ರಿಯ ಸಂದರ್ಭದಲ್ಲಿ ಸುದ್ದಿಯಾಗುತ್ತಾರೆ.

ಈ ಬಾರಿ ಮೈದಾನಗಳು ಮಳೆಯಿಂದ ತೊಯ್ದು ಕೆಸರಾಗಿರುವುದರಿಂದ ನೃತ್ಯಕ್ಕೆ ತೊಂದರೆ ಆಗಬಾರದೆಂದು ಗರ್ಬಾ ಆಯೋಜಕರು ಮರದ ಪ್ಲ್ಯಾಟ್‌ಫಾರ್ಮ್‌ಗಳನ್ನು ನಿರ್ಮಿಸಿದ್ದಲ್ಲದೆ ‘‘ಮಳೆಬರಲಿ, ಮೋಡ ಕವಿಯಲಿ, ಗರ್ಬಾ ನೃತ್ಯ ನಿಲ್ಲಲಾರದು’’ ಎಂಬ ಸ್ಲೋಗನ್ ಅಳವಡಿಸಿದ್ದಾರೆ. ಬೊರಿವಲಿಯಲ್ಲಿ ನಾಯ್ಡು ಕ್ಲಬ್ ಕೋರಾ ಕೇಂದ್ರ ಪ್ರಮುಖ ಆಯೋಜಕರಲ್ಲಿ ಒಬ್ಬರು. ಅವರ ಸಹಿತ ನಗರದ ಎಲ್ಲಾ ದಾಂಡಿಯಾ-ಗರ್ಬಾ ಆಯೋಜಕರು ಮರದ ಪ್ಲ್ಯಾಟ್‌ಫಾರ್ಮ್ ಅಳವಡಿಸಿದ್ದಾರೆ. ಅಂತೂ ಗಣೇಶೋತ್ಸವದ ದಿನಗಳಿಂದ ಬರುವ ಮಳೆ ನವರಾತ್ರಿಯ ದಾಂಡಿಯಾಕ್ಕೂ ಈ ಬಾರಿ ಕಿರಿಕಿರಿ ಹುಟ್ಟಿಸಿದೆ.

* * *

ಮಹಾರಾಷ್ಟ್ರದಲ್ಲೂ ‘ಒಬ್ಬ ವಿದ್ಯಾರ್ಥಿ ಒಂದು ವೃಕ್ಷ’
ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ‘‘ತಮಿಳುನಾಡು ಮಾದರಿಯಲ್ಲಿ ಮಹಾರಾಷ್ಟ್ರದಲ್ಲೂ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ‘ಒಬ್ಬ ವಿದ್ಯಾರ್ಥಿ ಒಂದು ವೃಕ್ಷ’ದ ಸಂಕಲ್ಪಜಾರಿಗೆ ತರಲು ಸಲಹೆ ನೀಡಿದ್ದಾರೆ. ತಮಿಳುನಾಡಿನಂತೆ ಮಹಾರಾಷ್ಟ್ರದಲ್ಲೂ ಇದು ಜಾರಿಗೆ ಬರಲಿದೆ. ಮಹಾರಾಷ್ಟ್ರದ ವಿದ್ಯಾರ್ಥಿಗಳು ನದಿ ಸಂರಕ್ಷಣೆ ಮತ್ತು ಮರಬೆಳೆಸುವ ಕೆಲಸಗಳಲ್ಲಿ ಸಹಕಾರ ನೀಡಲು ಮುಂದೆ ಬರಬೇಕು’’ ಎಂದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್, ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಉಪಸ್ಥಿತರಿದ್ದರು.

ರಾಜ್ ಭವನದಲ್ಲಿ ಆಯೋಜಿಸಿದ ಈ ಕಾರ್ಯಕ್ರಮವನ್ನು ಉದ್ದೇಶಿಸಿ ರಾಜ್ಯಪಾಲರು ಮಾತನಾಡುತ್ತಾ, ‘‘ಮಹಾರಾಷ್ಟ್ರದ ಜನಸಂಖ್ಯೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನ ನಾಲ್ಕು ಪಟ್ಟು ಇದೆ. 65 ಶೇ. ಜನಸಂಖ್ಯೆ ಯುವಕರದ್ದಾಗಿದೆ. ಯುವವರ್ಗ ನದಿ ಸಂರಕ್ಷಣೆ ಮತ್ತು ಹಸಿರು ಬೆಳೆಸುವ ಕೆಲಸಗಳಲ್ಲಿ ಸಹಕಾರ ನೀಡಬೇಕು’’ ಎಂದರಲ್ಲದೆ ತಾನು ತಮಿಳುನಾಡು ಮಹಾರಾಷ್ಟ್ರದ ರಾಜ್ಯಪಾಲ - ವಿ.ವಿ. ಕುಲಪತಿ. ಎರಡೂ ರಾಜ್ಯಗಳ ವಿಶ್ವವಿದ್ಯಾನಿಲಯಗಳು ನದಿ ಸಂರಕ್ಷಣೆ ಮತ್ತು ವೃಕ್ಷಾರೋಪಣಕ್ಕೆ ಬೆಂಬಲಿಸುತ್ತವೆ ಎಂದರು. ಇದೇ ವೇದಿಕೆಯಲ್ಲಿ ನದಿಗಳ ರಕ್ಷಣೆಗೆ ಜನಜಾಗೃತಿ ಮೂಡಿಸುತ್ತಿರುವ ಸದ್ಗುರು ಜಗ್ಗಿ ವಾಸುದೇವ ಅವರು ತಾನು ಹಮ್ಮಿಕೊಂಡ ‘ರ್ಯಾಲಿ ಫಾರ್ ರಿವರ್ಸ್’ ಅಭಿಯಾನವನ್ನು ವಿವರಿಸಿದರು. ಅರಣ್ಯ ಮಂತ್ರಿ ಸುಧೀರ್ ಮುನ್‌ಗಂಟೀವಾರ್ ಅವರು ಮುಂದಿನ 3 ವರ್ಷಗಳಲ್ಲಿ 50 ಕೋಟಿ ವೃಕ್ಷಗಳನ್ನು ನೆಡುವ ಯೋಜನೆಯ ಬಗ್ಗೆ ತಿಳಿಸಿದರು. ಇದಕ್ಕೆ ಇಶಾ ಫೌಂಡೇಶನ್ ಸಹಾಯ ನೀಡಲಿದೆ. ‘‘ಜಲ್ - ಜಂಗಲ್ -ಜಮೀನ್ ಈ ಮೂರರ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯ’’ ಎಂದರು ಸಚಿನ್ ತೆಂಡೂಲ್ಕರ್.

* * *

ಲತಾ ಮಂಗೇಶ್ಕರ್‌ರ ನಕಲಿ ಸಹಿಯಿಂದ ವಂಚನೆ: ಮಹಿಳೆಯ ಹುಡುಕಾಟ
ಮುಂಬೈಯ ಗಾಂವ್‌ದೇವಿ ಪೊಲೀಸರು ಲತಾ ಮಂಗೇಶ್ಕರ್‌ರ ನಕಲಿ ಸಹಿಯ ಮೂಲಕ ಲಕ್ಷಗಟ್ಟಲೆ ರೂಪಾಯಿ ವಂಚಿಸುತ್ತಿದ್ದ ಮಹಿಳೆಯೊಬ್ಬರ ಹುಡುಕಾಟದಲ್ಲಿದ್ದಾರೆ. ಈ ಸಂಬಂಧವಾಗಿ ಗಾಂವ್‌ದೇವಿ ಪೊಲೀಸರು ಐಪಿಸಿ ಸೆಕ್ಷನ್ 420, 465, 468, 469, 471ರ ಅನ್ವಯ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮಹಿಳೆ 14-4-2017ರಿಂದ 18-9-2017 ರ ನಡುವೆ ಭಾರತ ರತ್ನ ಲತಾ ಮಂಗೇಶ್ಕರ್ ಹೆಸರಿನ ನಕಲಿ ಆಮಂತ್ರಣ ಪತ್ರ ಮುದ್ರಿಸಿ ಅವರ ಹೆಸರಿನ ನಕಲಿ ಹಸ್ತಾಕ್ಷರ ಮತ್ತು ಮೊಹರು ಛಾಪಿಸಿ ಜನರನ್ನು ವಂಚಿಸಿದ್ದಳು. ಆರೋಪಿ ಮಹಿಳೆಯು ಲತಾ ಹೊರತಾಗಿ ಇತರ ಗಣ್ಯರ ಹೆಸರಲ್ಲೂ ನಕಲಿ ಸಹಿಯ ಆಮಂತ್ರಣ ಪತ್ರಿಕೆ ಮುದ್ರಿಸಿ ಹಣ ಸಂಗ್ರಹಿಸಿದ್ದಳೆಂದು ತಿಳಿದು ಬಂದಿದೆ.
* * *

ಕಾಂಗ್ರೆಸ್ ಕಾರ್ಯಕರ್ತರಿಂದ ಪಿತೃಪಕ್ಷ ಆಂದೋಲನ

ಪೆಟ್ರೋಲ್-ಡೀಸೆಲ್-ಗ್ಯಾಸ್ ಬೆಲೆ ಏರಿಕೆಯಿಂದಾಗಿ ಜನರು ಸಂಕಷ್ಟ ಪಡುತ್ತಿರುವ ದೃಶ್ಯ ಒಂದೆಡೆ, ಮತ್ತೊಂದೆಡೆ ನಿರುದ್ಯೋಗದ ಭೀತಿ. ಇವುಗಳನ್ನು ಮುಂದಿಟ್ಟು ಥಾಣೆ ಕಾಂಗ್ರೆಸ್ ಮೊನ್ನೆ ಮೋದಿ ಸರಕಾರದ ವಿರುದ್ಧ ಪಿತೃಪಕ್ಷ ಆಂದೋಲನ ನಡೆಸಿತು. ಕಾಂಗ್ರೆಸಿಗರು ತಮ್ಮ ಕೇಶ ಮುಂಡನ ಗೈದು ಪಿಂಡದಾನ ಮಾಡಿ ಕೇಂದ್ರ ಸರಕಾರಕ್ಕೆ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಥಾಣೆ ಕಾಂಗ್ರೆಸ್ ಅಧ್ಯಕ್ಷ ಮನೋಜ್ ಶಿಂದೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು-ಪದಾಧಿಕಾರಿಗಳು ಥಾಣೆ ಶಹರದ ಚೌಪಾಟಿ ಎಂದು ಕರೆಸಿಕೊಂಡಿರುವ ಮಾಸುಂದಾ ತಾಲಾಬ್ ತೀರಕ್ಕೆ ತೆರಳಿ ಅಹಲ್ಯಾ ಬಾಯಿ ಹೋಳ್ಕರ್ ಪ್ರತಿಮೆ ಎದುರು ಒಟ್ಟು ಸೇರಿ ಮೋದಿ ಸರಕಾರದ ವಿರುದ್ಧ ಆಂದೋಲನಗೈದರು. ಮಹಿಳೆಯರು ಸಿಲಿಂಡರ್‌ನ್ನು ತಮ್ಮ ತಲೆ ಮೇಲೆ ಹೊತ್ತುಕೊಂಡರು.

* * *

ಎನ್‌ಸಿಪಿ ನಾಯಕರಿಂದ ಚಾನೆಲ್‌ಗಳಿಗೆ ನೋಟಿಸ್
ಮುಂಬೈಯಲ್ಲಿರುವ ಇಕ್ಬಾಲ್ ಕಾಸ್ಕರ್ ಥಾಣೆ ಪೊಲೀಸರಿಂದ ಬಂಧಿಸಲ್ಪಟ್ಟ ಸುದ್ದಿಯ ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ಎನ್‌ಸಿಪಿ ನೇತಾರರ ಉಲ್ಲೇಖ ಮಾಡಿದ್ದನ್ನು ಮುಂದಿಟ್ಟು ಎನ್‌ಸಿಪಿ ನೇತಾರರು 40 ಸುದ್ದಿ ಚಾನೆಲ್‌ಗಳ ವಿರುದ್ಧ ನೋಟಿಸ್ ಕಳುಹಿಸಲು ಮುಂದಾಗಿದ್ದಾರೆ. ಎನ್.ಸಿ.ಪಿ. ವಕ್ತಾರ ನವಾಬ್ ಮಲಿಕ್ ಅವರು ಸುದ್ದಿಗೋಷ್ಠಿ ಏರ್ಪಡಿಸಿ ಈ ಸಂಗತಿ ತಿಳಿಸಿದ್ದಾರೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News