ಕೇಂದ್ರದಿಂದ ಸ್ಥಳೀಯ ಭಾಷೆಗಳ ಅಸ್ಥಿತ್ವ ನಾಶ: ಪ್ರೊ.ಎಸ್.ಜಿ.ಸಿದ್ದರಾಮಯ್ಯ
ಬೆಂಗಳೂರು, ಡಿ.10: ಕೇಂದ್ರ ಸರಕಾರ ಸ್ಥಳೀಯ ಭಾಷೆಗಳ ಅಸ್ಥಿತ್ವವನ್ನು ನಾಶ ಮಾಡುವ ಹುನ್ನಾರ ಮಾಡುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.
ರವಿವಾರ ನಗರದ ನಯನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ‘ಕನ್ನಡ ನುಡಿ ಹಬ್ಬ’ ಹಾಗೂ ‘ಕದಂಬ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣದಿಂದ ಹಿಡಿದು ಜನರ ಆಡಳಿತ ಭಾಷೆವರೆಗೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರ ಮಧ್ಯಪ್ರವೆೀಶ ಮಾಡುತ್ತಿದೆ ಎಂದು ದೂರಿದರು.
ಶೈಕ್ಷಣಿಕವಾಗಿ ಮತ್ತು ಸ್ಪರ್ಧಾತ್ಮಕವಾಗಿ ಸ್ಥಳೀಯ ಭಾಷೆಗಳ ಸ್ಥಾನಮಾನ ಕಡಿತಗೊಳಿಸಲಾಗಿದೆ. ಅಲ್ಲದೆ, ಇತ್ತೀಚಿಗೆ ನಡೆದ ಜೆಇಇ ಪರೀಕ್ಷೆಯಲ್ಲಿ ಮೂರು ಭಾಷೆಗಳಿಗೆ ಅವಕಾಶ ನೀಡಿದ್ದು, ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ನಿರ್ಲಕ್ಷಿಸಿ ಗುಜರಾತಿಗೆ ಅವಕಾಶ ನೀಡಿದ್ದಾರೆ. ಹಾಗೂ ಬ್ಯಾಂಕಿಂಗ್‌ಗೆ ನಡೆದ ಪರೀಕ್ಷೆಯಲ್ಲಿ ಏಳು ಸಾವಿರ ಹುದ್ದೆಗಳಿಗೆ ಕನ್ನಡಿಗರಿಗೆ ಕೇವಲ 380 ಹುದೆ್ದಗಳು ದೊರೆತಿವೆ ಎಂದು ತಿಳಿಸಿದರು.
ಖಾಸಗಿ ಶಿಕ್ಷಣ ವಲಯದಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ ಎಂದ ಅವರು, ಉನ್ನತ ಹುದ್ದೆಯಲ್ಲಿದ್ದ ಕೆಲವು ಸಾಹಿತಿಗಳು ತಿಂದ ಮನೆಗೆ ದ್ರೋಹ ಬಗೆಯುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇಲ್ಲದ ಜಗಳವನ್ನು ಹುಟ್ಟಿ ಹಾಕಲು ಮುಂದಾಗಿರುವ ಅವರು, ಉರ್ದು ಭಾಷೆಯನ್ನು ಕನ್ನಡದ ಮೇಲೆ ಎತ್ತಿ ಕಟ್ಟುತ್ತಿದ್ದಾರೆ. ಸಾಹಿತಿಗಳು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಮತ್ತೊಬ್ಬರನ್ನು ಟೀಕೆ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕು. ಟೀಕೆ ಮಾಡುವ ವೇಳೆ ಅವರ ತಂದೆ-ತಾಯಿ, ಮಹಿಳೆಯರ ಗೌರವ, ಘನತೆಗೆ ಹರಾಜು ಹಾಕುವ ರೀತಿಯಲ್ಲಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪ್ರಾಮಾಣಿಕತೆ ಇಲ್ಲದ ಆಲೋಚನೆ, ನುಡಿ ಮತ್ತು ಬರಹ ಎಲ್ಲಿಯೂ ಸಲ್ಲದು ಎಂದು ಮಹಾತ್ಮಗಾಂಧಿ ಹೇಳಿದ್ದರು. ಇದನ್ನು ನೋಡಿದರೆ ಜಗತ್ತಿನಲ್ಲಿ ಯಾರು ಪ್ರಾಮಾಣಿಕವಾಗಿ ಇದ್ದರೋ ಅವರು ಇಂದಿಗೂ ಪ್ರಸ್ತುತವಾಗಿದ್ದಾರೆ. ಮಹಾತ್ಮಗಾಂಧಿ, ಲೋಹಿತಾ, ಅಂಬೇಡ್ಕರ್ ರ ವಿಚಾರಗಳು ಮಾತ್ರ ಇಂದಿಗೂ ಪ್ರಸು್ತತ ಎನಿಸುತ್ತವೆ ಎಂದು ನುಡಿದರು.
ಯಾವುದೇ ಆಕಾಂಕ್ಷಿಯಿಲ್ಲದೆ, ಕಳಂಕ ರಹಿತ ಸಮಾಜ ಸೇವೆ ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಅಂತಹವರಿಂದ ಮಾತ್ರ ಸಮಾಜದ ಸ್ವಾಸ್ಥ ಉಳಿಯುತ್ತದೆ. ಜೀವನದುದ್ದಕ್ಕೂ ಏನನ್ನು ನಿರೀಕ್ಷಿಸದೆ ಸಾಧನೆ ಮಾಡುವ ಹಲವರಿದ್ದಾರೆ. ಆದರೆ, ನಾವು ಎಲ್ಲ ಮಾಡಿದ್ದೇವೆ ಎಂದು ಮೆರೆಯುವವರಿದ್ದರೂ, ಅವರ ಸಾಧನೆ ಮಾತ್ರ ಶೂನ್ಯ ಎಂದರು.
ಸಾಹಿತಿ ಡಾ.ವಿಜಯಾ ಮಾತನಾಡಿ, ಇಂದಿನ ಸಮಾಜದಲ್ಲಿ ಮನಸ್ಸಿನ ಮಾತನ್ನು ವ್ಯಕ್ತಪಡಿಸುವ ವಾತಾವರಣವಿಲ್ಲ. ಮನ್ ಕಿ ಬಾತ್ ಅನ್ನು ಉಳ್ಳವರು ಗುತ್ತಿಗೆ ಪಡೆದುಕೊಂಡಿದ್ದಾರೆ ಎಂದ ಅವರು, ರವಿ ಬೆಳಗೆರೆ ಬಂಧನ ಅವಮಾನಕರವಾದುದು. ಪತ್ರಿಕೆ ಮಾಡುವುದು, ಅದನ್ನು ನಡೆಸುವುದು ಅವರ ವೈಯುಕ್ತಿಕ ವಿಚಾರ ಎಂದು ಹೇಳಿದರು.
ನಾಡಿನಲ್ಲಿ ಕನ್ನಡ ಎಂಬುದು ದಿನದಿಂದ ದಿನಕ್ಕೆ ಕಷ್ಟದ ಸನ್ನಿವೇಶ ಎದುರಿಸುತ್ತಿದೆ. ಕನ್ನಡ ಕಡ್ಡಾಯ ಮಾಡಬೇಕು ಎಂದರೆ ನ್ಯಾಯಾಲಯಕ್ಕೆ ಹೋಗುತ್ತಾರೆ. ಆದರೆ, ಆಸ್ಟ್ರೇಲಿಯಾದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಕನ್ನಡವನ್ನು ಎರಡನೇ ಭಾಷೆಯಾಗಿ ಕಡ್ಡಾಯ ಮಾಡಿದ್ದಾರೆ. ನ್ಯಾಯಾಲಯದ ತೀರ್ಪುಗಳು ಕನ್ನಡವನ್ನು ಕೊಲ್ಲುತ್ತಿದೆ. ಶಿಕ್ಷಣ ಉದ್ಯಮವಾದ ನಂತರ ಭಾಷೆ ಕಲಿಯಲು, ಮಾತನಾಡಲು ಬಿಡುತ್ತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಪದ್ಮ ಶೇಖರ್ ಉಪಸ್ಥಿತರಿದ್ದರು. ಇದೇ ವೇಳೆ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂದರಾ ಭೂಪತಿ, ಕೆ.ಕೃಷ್ಣಮೂರ್ತಿ, ಸ್ವಾಮಿಗೌಡ, ಡಾ.ಎ.ಡಿ.ಶಿವರಾಮ್, ಪೊಲೀಸ್ ಅಧಿಕಾರಿ ಬಿ.ಕೆ.ಶೇಖರ್, ಟಿ.ಎಸ್.ಆನಂದ್, ಎಂ.ಆರ್.ರಂಗಸ್ವಾಮಿ, ಎ.ಎಸ್. ನಾಗರಾಜ್, ಆರ್.ಸುರೇಶ್‌ಗೆ ‘ಕದಂಬ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.