23 ವರ್ಷಗಳ ಸುದೀರ್ಘ ಕಾಲ ನ್ಯಾಯವಿಳಂಬಕ್ಕೆ ಕಾರಣವಾದ ಅಂಶವೇನು ಗೊತ್ತೇ?

Update: 2018-01-04 10:40 IST
23 ವರ್ಷಗಳ ಸುದೀರ್ಘ ಕಾಲ ನ್ಯಾಯವಿಳಂಬಕ್ಕೆ ಕಾರಣವಾದ ಅಂಶವೇನು ಗೊತ್ತೇ?
  • whatsapp icon

ಹೊಸದಿಲ್ಲಿ, ಜ.4: ಸರ್ಕಾರಿ ಸ್ವಾಮ್ಯದ ಕಂಪೆನಿಯಿಂದ ವಜಾಗೊಂಡ ಚಾಲಕನೊಬ್ಬ, ತನ್ನನ್ನು ಕಿತ್ತುಹಾಕಿದ ಪ್ರಕರಣವನ್ನು ಪ್ರಶ್ನಿಸಲು ಸೂಕ್ತ ವೇದಿಕೆ ಯಾವುದು ಎಂದು ನ್ಯಾಯಾಲಯ ನಿರ್ಣಯಿಸಲು 23 ವರ್ಷಗಳ ಸುದೀರ್ಘ ಕಾಲ ತೆಗೆದುಕೊಂಡ ಕುತೂಹಲಕಾರಿ ಘಟನೆ ಬೆಳಕಿಗೆ ಬಂದಿದೆ. ಇದು ಭಾರತದ ನ್ಯಾಯಾಂಗ ವ್ಯವಸ್ಥೆಯ ಆಮೆನಡಿಗೆಗೆ ನಿದರ್ಶನವಾಗಿದೆ.

ಈ ಪ್ರಕರಣ ಸುಪ್ರೀಂಕೋರ್ಟ್ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದ ಐದು ವರ್ಷದ ಬಳಿಕ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ 2017ರ ಡಿಸೆಂಬರ್‌ನಲ್ಲಿ ತೀರ್ಪು ನೀಡಿ, 1994ರಲ್ಲಿ ಕೆಲಸದಿಂದ ವಜಾಗೊಂಡ ಪ್ರದೀಪ್ ಕುಮಾರ್ ಗಂಗೂಲಿಯವರ ಪ್ರಕರಣ ವಿಚಾರಣೆ ನಡೆಸಲು ಕೇಂದ್ರ ಸರ್ಕಾರದ ಕೈಗಾರಿಕಾ ನ್ಯಾಯಮಂಡಳಿ (ಸಿಜಿಐಟಿ) ಅಧಿಕಾರವ್ಯಾಪ್ತಿ ಹೊಂದಿದೆ ಎಂದು ಸ್ಪಷ್ಟಪಡಿಸಿದೆ. ಗಂಗೂಲಿ ಕೇಂದ್ರ ಸರ್ಕಾರಿ ಉದ್ಯೋಗಿಯೇ ಅಥವಾ ರಾಜ್ಯ ಸರ್ಕಾರಿ ಕಂಪೆನಿಯ ಉದ್ಯೋಗಿಯೇ ಎನ್ನುವುದನ್ನು ನಿರ್ಧರಿಸಲು ಕೇಂದ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಎರಡು ದಶಕಕ್ಕೂ ಅಧಿಕ ಕಾಲ ನ್ಯಾಯಸಮರ ನಡೆಸಿವೆ.

ಭಾರತದ ಅಗ್ರಗಣ್ಯ ಹಡಗು ನಿರ್ಮಾಣ ಸಂಸ್ಥೆಗಳಲ್ಲೊಂದಾದ ಕೊಲ್ಕತ್ತಾ ಮೂಲದ ಗಾರ್ಡನ್‌ ರೀಚ್ ಶಿಪ್‌ ಬಿಲ್ಡರ್ಸ್‌ ಆ್ಯಂಡ್ ಎಂಜಿನಿಯರ್ಸ್‌ ಲಿಮಿಟೆಡ್, ರಕ್ಷಣಾ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ. ಇಲ್ಲಿಂದ ವಜಾಗೊಂಡ ನೌಕರನ ಪ್ರಕರಣವನ್ನು ಸಿಜಿಐಟಿ ಮೂರು ತಿಂಗಳ ಒಳಗಾಗಿ ಇತ್ಯರ್ಥಪಡಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಹಡಗು ನಿರ್ಮಾಣ ಸಂಸ್ಥೆ ಗಂಗೂಲಿಗೆ ವ್ಯಾಜ್ಯ ವೆಚ್ಚವಾಗಿ ತಕ್ಷಣ 2 ಲಕ್ಷ ರೂ. ಪಾವತಿಸಬೇಕು ಎಂದೂ ಆದೇಶ ನಿಡಿದೆ.

ಕೆಲಸದಿಂದ ವಜಾಗೊಳ್ಳುವ ವೇಳೆ 26 ವರ್ಷದವರಾಗಿದ್ದ ಗಂಗೂಲಿ, ದಿನಗೂಲಿಯಾಗಿ ಕಾರ್ಯನಿರ್ವಹಿಸಿ ಕುಟುಂಬ ನಿರ್ವಹಿಸುತ್ತಿದ್ದ. ಅದಕ್ಷತೆಯ ಕಾರಣದಿಂದ ತನ್ನನ್ನು ವಜಾ ಮಾಡಿದ್ದನ್ನು ಗಂಗೂಲಿ ಸಿಜಿಐಟಿಯಲ್ಲಿ ಪ್ರಶ್ನಿಸಿದ್ದ. ಈ ಪ್ರಕರಣ 2010ರಲ್ಲಿ ವಜಾಗೊಂಡಿದ್ದು, ಜಿಆರ್‌ಎಸ್‌ಇ ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News