ಉ.ಪ್ರದೇಶ: ಹಸಿವಿಗೆ ಮತ್ತೊಬ್ಬ ಬಲಿ

Update: 2018-01-05 19:27 IST
ಉ.ಪ್ರದೇಶ: ಹಸಿವಿಗೆ ಮತ್ತೊಬ್ಬ ಬಲಿ
  • whatsapp icon

ಲಕ್ನೊ, ಜ.5: ಬರೇಲಿ ಜಿಲ್ಲೆಯ ಆಂವ್ಲ ಗ್ರಾಮದಲ್ಲಿ 47 ವರ್ಷದ ವ್ಯಕ್ತಿಯೋರ್ವ ಅಸಹಜವಾಗಿ ಮೃತಪಟ್ಟಿದ್ದು ಈತ ಹಸಿವಿನಿಂದ ಬಳಲಿ ಮೃತಪಟ್ಟಿರುವುದಾಗಿ ಸಂಬಂಧಿಕರು ಹೇಳಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಜಿಲ್ಲಾಡಳಿತ, ಚಳಿಯಿಂದ ಆತ ಮೃತಪಟ್ಟಿದ್ದಾನೆ ಎಂದು ಹೇಳಿದೆ. ಬರೇಲಿಯಲ್ಲಿ ಈಗ ತಾಪಮಾನ 6 ಡಿಗ್ರಿ ಸೆಲ್ಶಿಯಸ್‌ಗೆ ಇಳಿದಿದೆ.

     ಕುಂದರಿಯಾ ಗ್ರಾಮದ ನೇಮ್‌ಚಂದ್ರ ಶ್ರೀವಾಸ್ತವ ಮೃತಪಟ್ಟ ವ್ಯಕ್ತಿಯಾಗಿದ್ದು ಈತ ಜೀರ್ಣಾವಸ್ಥೆಯಲ್ಲಿರುವ ತನ್ನ ಪಿತ್ರಾರ್ಜಿತ ಮನೆಯಲ್ಲಿ ವೃದ್ಧ ತಾಯಿಯೊಂದಿಗೆ ವಾಸಿಸುತ್ತಿದ್ದ . ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ನಂತರ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರಧನ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗೀಯ ಅಧಿಕಾರಿ ಮಮತಾ ಮಾಳವೀಯ ತಿಳಿಸಿದ್ದಾರೆ.

      ಮೃತವ್ಯಕ್ತಿಯ ತಾಯಿಗೆ ಅಂತ್ಯೋದಯ ಯೋಜನೆಯಡಿ ಪಡಿತರ ಲಭ್ಯವಾಗುತ್ತಿತ್ತು ಎಂದವರು ತಿಳಿಸಿದ್ದಾರೆ. ಅರೆಕಾಲಿಕ ಕ್ಷೌರಿಕ ವೃತ್ತಿ ನಡೆಸುತ್ತಿದ್ದ ನೇಮ್‌ಚಂದ್ರನ ಮನೆಯಲ್ಲಿ ಆಹಾರದ ಕೊರತೆಯಿತ್ತು. ಆದ್ದರಿಂದ ಆತ ಹೆಚ್ಚಿನ ಸಂದರ್ಭ ಬರಿಹೊಟ್ಟೆಯಲ್ಲೇ ಮಲಗುವ ಸಂದರ್ಭವಿತ್ತು. ಇದೇ ಕಾರಣ ಆತ ಮೃತಪಟ್ಟಿದ್ದಾನೆ ಎಂದು ಮೃತವ್ಯಕ್ತಿಯ ಸಂಬಂಧಿಕರು ದೂರಿದ್ದಾರೆ.  

      ಜೀರ್ಣಾವಸ್ಥೆಗೆ ತಲುಪಿದ್ದ ಮನೆಯಲ್ಲಿ ವಾಸಿಸುತ್ತಿದ್ದ ನೇಮ್‌ಚಂದ್ರ ರಾಜ್ಯ ಸರಕಾರದ ‘ಬಡಜನರ ವಸತಿ ಯೋಜನೆಯಡಿ’ ಮನೆಗಾಗಿ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿ ತಿರಸ್ಕೃತಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News