ಹಸುಗಳನ್ನು ಪರಿತ್ಯಜಿಸಿದರೆ ಕ್ರಿಮಿನಲ್ ಅಪರಾಧ

Update: 2018-01-05 21:42 IST
ಹಸುಗಳನ್ನು ಪರಿತ್ಯಜಿಸಿದರೆ ಕ್ರಿಮಿನಲ್ ಅಪರಾಧ
  • whatsapp icon

ಭೋಪಾಲ್, ಜ.5: ಹಾಲು ಕರೆಯದ ಅಥವಾ ಮುದಿ ಹಸುಗಳನ್ನು ಪರಿತ್ಯಜಿಸುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲು ಮಧ್ಯಪ್ರದೇಶ ಸರಕಾರ ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ‘ಗೋ ಸುರಕ್ಷತಾ ಕಾಯ್ದೆ’ಯನ್ನು ಸಮಗ್ರವಾಗಿ ಪರಿಷ್ಕರಿಸಿ, ಪ್ರಯೋಜನಕ್ಕೆ ಬಾರದ ಹಸುಗಳನ್ನೂ ಸಾಕುವುದನ್ನು ಕಡ್ಡಾಯಗೊಳಿಸುವ ನಿಯಮವನ್ನು ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ. ಇದನ್ನು ತೀವ್ರವಾಗಿ ವಿರೋಧಿಸಿರುವ ವಿಪಕ್ಷಗಳು, ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಟೀಕಿಸಿವೆ.

 2004ರ ‘ಗೋ ಹತ್ಯೆ’ ನಿಯಮದಲ್ಲಿ ತಿದ್ದುಪಡಿ ಮಾಡುವ ಮೂಲಕ ಹಸುಗಳನ್ನು ಪರಿತ್ಯಜಿಸುವವರ ವಿರುದ್ಧ ಪೊಲೀಸ್ ದೂರು ದಾಖಲಿಸಲು ಜಿಲ್ಲಾಡಳಿತಕ್ಕೆ ಅಧಿಕಾರ ನೀಡಬೇಕೆಂದು ಪಶು ಸಂಗೋಪನಾ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕೋರಲಾಗಿದೆ. ಈ ಕುರಿತ ಕರಡು ಪ್ರತಿಯನ್ನು ಕಾನೂನು ಇಲಾಖೆಯ ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸರಕಾರ ಗೋಮಾತೆಯ ಸೇವೆ ಸಲ್ಲಿಸಲು ಕಾನೂನನ್ನು ಜಾರಿಗೊಳಿಸಿದೆ. ಆದರೆ ಹಸುಗಳ ಮಾಲಕರೂ ಸಹಕರಿಸಬೇಕು. ಕಾನೂನಿನಲ್ಲಿ ಅಡಕಗೊಂಡಿರುವ ಅಂಶಗಳ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ ಎಂದು ರಾಜ್ಯದ ಕಾನೂನು ಸಚಿವ ರಾಮ್‌ಪಾಲ್ ಸಿಂಗ್ ಹೇಳಿದ್ದಾರೆ.

 ಸರಕಾರದ ಈ ನಡೆಯ ಹಿಂದೆ ‘ಕೇಸರಿ ಅಜೆಂಡಾ’ ಅಡಗಿದೆ ಎಂದು ವಿಪಕ್ಷ ಕಾಂಗ್ರೆಸ್ ದೂರಿದೆ. ಹಸುಗಳನ್ನು ರಕ್ಷಿಸಲು ನಡೆಸಿರುವ ಕಟ್ಟಕಡೆಯ ಪ್ರಯತ್ನ ಇದು ಎಂಬಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬಿಂಬಿಸುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಕ್ರಮಕ್ಕೆ ಸರಕಾರ ಮುಂದಾಗಿದೆ. ಆದರೆ ದುರದೃಷ್ಟವಶಾತ್, ಇದು ಕೃಷಿಕರ ಹಿತಾಸಕ್ತಿಗೆ ವಿರುದ್ಧವಾಗಿರುವ ಕಾರಣ ಸರಕಾರಕ್ಕೆ ತಿರುಗುಬಾಣವಾಗಲಿದೆ ಎಂದು ವಿಧಾನಸಭೆಯಲ್ಲಿ ವಿಪಕ್ಷಗಳ ನಾಯಕ ಅಜಯ್ ಸಿಂಗ್ ಹೇಳಿದ್ದಾರೆ.

ಈ ಆರೋಪವನ್ನು ತಳ್ಳಿ ಹಾಕಿರುವ ಕಾನೂನು ಸಚಿವ ರಾಮ್‌ಪಾಲ್ ಸಿಂಗ್, ಇಲ್ಲಿರುವ ಅಜೆಂಡಾ ಒಂದೇ. ಅದು ಗೋಮಾತೆಯ ಸೇವೆ. ಇದು ಇಡೀ ದೇಶದ ಅಜೆಂಡಾ ಆಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News